ಹಾಸನ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರು ಜೂನ್ 24ರ ಶನಿವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲಿಸಿದರು, ಬಳಿಕ ಹಾಸನ-ಶಿರಾಡಿಘಾಟ್ನಲ್ಲಿ ಟನಲ್ ನಿರ್ಮಿಸುವ ಬಗ್ಗೆ ಸುಳಿವು ನೀಡಿದರು. ಹಾಗೂ ಇದೇ ವೇಳೆ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಭೂಕುಸಿತದ(Landslide) ಸಮಸ್ಯೆ ಎದುರಿಸುತ್ತಿರುವ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಶೀಘ್ರವಾಗಿ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆ ವೀಕ್ಷಣೆ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಲವಾರು ವರ್ಷಗಳಿಂದ ಈ ರಸ್ತೆಯ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ಕಾರಣಗಳಿಂದ ಇಲ್ಲಿಯವರೆಗೆ ಕಾಮಗಾರಿ ಪೂರ್ಣಗೊಳಿಸಲು ಆಗಿಲ್ಲ. ನಾನು ಸಚಿವನಾದ ನಂತರ ಈ ಸಮಸ್ಯೆ ನನ್ನ ಗಮನಕ್ಕೆ ಬಂತು. ಆ ಕಾರಣ ಇಂದು ರಸ್ತೆ ಪರಿಶೀಲನೆಗೆ ಆಗಮಿಸಿದ್ದೇನೆ. ನವೆಂಬರ್ 1 ರ ಒಳಗೆ ಹಾಸನದಿಂದ ಸಕಲೇಶಪುರದ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ. 2024ರ ಮಾರ್ಚ್ ವರೆಗೆ ಸಂಪೂರ್ಣ ಕಾಮಗಾರಿ ಮುಗಿಸಲು ಕಾಲಾವಕಾಶ ಕೋರಿದ್ದಾರೆ. ಪ್ರತಿ ತಿಂಗಳೂ ಈ ಬಗ್ಗೆ ಸಭೆ ಕರೆದು ಕಾಮಗಾರಿ ಬಗ್ಗೆ ಗಮನ ಕೊಡುತ್ತೇವೆ. ಹಿಂದೆ ಏನಾಗಿದೆ ಎಂಬುದಕ್ಕೆ ಹೋಗೋದಿಲ್ಲ. ಮುಂದೇ ಏನಾಗಬೇಕು ಎಂಬ ಚಾಲೆಂಜ್ ನಮ್ಮ ಸರ್ಕಾರದ ಮುಂದಿದೆ. ಈ ಕಾಮಗಾರಿಯನ್ನ ಮುಂದೆ ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು.
ಹಾಸನ-ಶಿರಾಡಿಘಾಟ್ನಲ್ಲಿ ಟನಲ್ ನಿರ್ಮಿಸುವ ಬಗ್ಗೆ ಸುಳಿವು
ಶಿರಾಡಿಘಾಟ್‌ನಲ್ಲಿ ಪರ್ಯಾಯ ಮಾರ್ಗ ಚಿಂತನೆ ಮಾಡಿದ್ದೇವೆ. ರಾ.ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬ್ಲ್ಯೂಪ್ರಿಂಟ್ ತೋರಿಸಿದ್ದಾರೆ. ಕೇಂದ್ರ ಸಾರಿಗೆ ಸಚಿವರ ಗಮನಕ್ಕೆ ಈ ವಿಷಯವನ್ನು ತರುತ್ತೇವೆ. ಸೋಮವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸಚಿವರನ್ನ ಭೇಟಿ ಮಾಡಿ ವಿಷಯ ಪ್ರಸ್ತಾಪ ಮಾಡುತ್ತೇವೆ. ಕೇಂದ್ರ ಸಚಿವರು ಒಪ್ಪಿಗೆ ಕೊಟ್ರೆ ದೇಶದಲ್ಲಿ ಹೊಸ ಮೈಲಿಗಲ್ಲು ಏಳಲಿದೆ. ಈ ಯೋಜನೆಗೆ ಸಂಪೂರ್ಣ ದುಡ್ಡು ಕೊಡೋದು ಹೆದ್ದಾರಿ ಪ್ರಾಧಿಕಾರ ಎನ್ನುವ ಮೂಲಕ ಹಾಸನ-ಶಿರಾಡಿಘಾಟ್ನಲ್ಲಿ ಟನಲ್ ನಿರ್ಮಿಸುವ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಸುಳಿವು ನೀಡಿದ್ದಾರೆ.
ಇನ್ನು ಇದೇ ವೇಳೆ ಗ್ಯಾರೆಂಟಿ ಯೋಜನೆ ಅನ್ನ ಭಾಗ್ಯ ಅಕ್ಕಿ ಖರೀದಿ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ರು. ಜುಲೈ ಒಂದರಿಂದ ಅಕ್ಕಿ ಕೊಡುವ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ. ಬೇರೆ ಬೇರೆ ರಾಜ್ಯಗಳ ಜೊತೆ ಚರ್ಚೆ ಮಾಡುತ್ತಿದ್ದಾರೆ. ಹೇಗೆ ತರಬೇಕು, ಸರಿದೂಗಿಸಬೇಕು ಎಂಬ ಯೋಚನೆ ಮಾಡುತ್ತಿದ್ದಾರೆ. ನೋಡೋಣ ಸಮಯ ಬೇಕಾಗುತ್ತದೆ. ಖಂಡಿತ ಸಮಯ ಬೇಕು ನೋಡೋಣ ಎಂದರು. ಇನ್ನು ನೂತನ ಶಾಸಕರುಗಳಿಗೆ ಧಾರ್ಮಿಕ ಗುರುಗಳಿಂದ ಪ್ರವಚನ ವಿಚಾರಕ್ಕೆ ಸಂಬಂಧಿಸಿ ಯಾವುದೇ ಧಾರ್ಮಿಕ ಗುರು ಇದ್ರೂ ಸಂವಿಧಾನದ ಪರವಾಗಿ ಇರಬೇಕು. ಸಂವಿಧಾನ ಬಿಟ್ಟು ಧಾರ್ಮಿಕ ಗುರುಗಳಿದ್ರೆ ಕಷ್ಟ ಆಗುತ್ತದೆ. ಅದರ ಬಗ್ಗೆ ಚಿಂತೆ ಮಾಡೋಣ ಎಂದರು. ಉಚಿತ ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸಲು ಸರ್ವರ್ ತೊಂದರೆ ಇದೆ. ಅದು ಹೊಸ ಯೋಜನೆ. ಪ್ರಾರಂಭದಲ್ಲಿ ತೊಂದರೆ ಆಗುತ್ತದೆ. ಒಂದು ತಿಂಗಳು ತಡವಾದ್ರೂ ಏನೂ ಸಮಸ್ಯೆ ಇಲ್ಲ. ಎಲ್ಲ ಸರಿ ಮಾಡುತ್ತೇವೆ. ಗ್ಯಾರೆಂಟಿ ಯೋಜನೆಗಳಿಂದ ಜನರಿಗೆ ಯಾವುದೇ ಗೊಂದಲವಿಲ್ಲ. ವಿಳಂಬ ಆಗುತ್ತಿದೆ ಹೊರತು ಗೊಂದಲ ಆಗುತ್ತಿಲ್ಲ ಎಂದು ತಿಳಿಸಿದರು.
ಗ್ಯಾರೆಂಟಿಗಳಿಗೆ ಕೇಂದ್ರ ವಿರೋಧ ಮಾಡುತ್ತಿದೆ. ರಾಜಕೀಯ ಅಂದ್ರೆ ವಿರೋಧ ಇರುತ್ತೆ. ಪರೋಕ್ಷವಾಗಿ ವಿರೋಧ ಮಾಡಿರಬಹುದು. ಆದ್ರೆ ನಾವು ಜನರಿಗೆ ಕೊಟ್ಟಿರುವ ಐದು ಗ್ಯಾರೆಂಟಿಗಳನ್ನು ನಾವು ಜಾರಿಗೆ ತರುತ್ತೇವೆ. ಕೇಂದ್ರದ ಕಡೆ ಸ್ಟಾಕ್ ಇತ್ತು ಅಕ್ಕಿ ಕೊಡಬಹುದಿತ್ತು. ಅವರ ಬಳಿ ಏಳು ಲಕ್ಷ ಮೆಟ್ರಿಕ್ ಟನ್ ಇತ್ತು ನಮೆಗೆ ಬೇಕಾಗಿರೋದು 2 ಲಕ್ಷ ಮೆಟ್ರಿಕ್ ಟನ್. ಅದನ್ನ ಹೊರತಾಗಿ ಏನು ದಾರಿ ಕಂಡುಕೊಳ್ಳಬೇಕು ನಾವು ಕಂಡುಕೊಳ್ಳುತ್ತೇವೆ. ನಾವು ಕೇಂದ್ರವನ್ನು ಗುರಿ ಮಾಡುತ್ತಿಲ್ಲ, ನಿಮ್ಮ ಬಳಿ ಅಕ್ಕಿ ಇರೋದನ್ನ ಕೊಡಿ ಎನ್ನುತ್ತಿದ್ದೇವೆ. ಮೊದಲು ಪತ್ರ ಬರೆದಿದ್ದೂ ಅವರೆ ನಂತರ ಇಲ್ಲ ಅಂದೋರು ಅವರೇ. ಸಂಘರ್ಷದ ಬದಲು ಬೇರೆ ದಾರಿ ಕಂಡುಕೊಳ್ಳುವುದು ಒಳ್ಳೆಯದು ಎಂದು ಸಚಿವ ಜಾರಕಿಹೊಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.