ಗೋಕಾಕ: ಗಿಡ-ಮರಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಆ ಮೂಲಕ ಜೀವಸಂಕುಲ ಉಳಿವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಘಟಪ್ರಭ ಅರಣ್ಯ ವಿಭಾಗದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಿ ನಂತರ ಮಾತನಾಡಿದ ಅವರು, ಉತ್ತಮ ಪರಿಸರದಿಂದ ಮಾನವನು ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಾನವನ ದುರಾಸೆಯಿಂದಾಗಿ ಇಂದು ಪರಿಸರ ನಾಶವಾಗುತ್ತಿದ್ದು, ಜಾಗತಿಕ ತಾಪಮಾನ ಹೆಚ್ಚಳವಾಗಿ ಇಡೀ ಜೀವ ಸಂಕುಲ ಸಂಕಷ್ಟ ಎದುರಿಸುವಂತಾಗಿದೆ. ಇದೇ ರೀತಿ ಪರಿಸರ ನಾಶ ಮುಂದುವರಿದರೆ ಭವಿಷ್ಯದಲ್ಲಿ ಉತ್ತಮ ಗಾಳಿಯನ್ನು ಹಣ ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ, ಮಾನವನು ಜಾಗೃತನಾಗಿ ಪರಿಸರ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು. ಖಾಲಿ ಪ್ರದೇಶಗಳಲ್ಲಿ ಗಿಡನೆಟ್ಟು ಆರೈಕೆ ಮಾಡುವ ಮೂಲಕ ಅರಣ್ಯ ಸಂಪತ್ತನ್ನು ಹೆಚ್ಚಿಸಬೇಕು ಎಂದರು.
ಮನುಷ್ಯ ಯಾವುದೇ ಲಾಭವಿಲ್ಲದೆ ಕೆಲಸ ಮಾಡುವುದಿಲ್ಲ. ಗಿಡಗಳನ್ನು ನೆಡುವುದರಿಂದ ನಮಗೇನು ಲಾಭವಿಲ್ಲವೆಂದು ಗಿಡ ನೆಡಲು ಯಾರೂ ಮುಂದಾಗುತ್ತಿಲ್ಲ. ಆದರೆ, ಗಿಡನೆಡದಿದ್ದರೆ ಮಾನವ ಸಂತತಿಯೇ ನಶಿಸಿ ಹೋಗುತ್ತದೆ ಎಂಬ ಅರಿವಿಲ್ಲದಂತಾಗಿದೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ದುಬಾರಿ ಉಡುಗೊರೆ ನೀಡುವ ಬದಲು, ಕಾರ್ಯಕ್ರಮದ ಹೆಸರಿನಲ್ಲಿ ಗಿಡಗಳನ್ನು ನೆಡುವ ಸಂಪ್ರದಾಯ ಬೆಳೆಯಬೇಕು.ಅರಣ್ಯ ಸಂಪತ್ತನ್ನು ಹೆಚ್ಚಿಸಲು ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ, ನೆಟ್ಟ ಗಿಡಗಳು ಮರವಾಗುವಂತೆ ಆರೈಕೆ ಮಾಡುವುದು ಅಷ್ಟೇ ಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಿ.ಎಫ್.ಓ ಅಂಥೋನಿ ಮರಿಯಪ್ಪ, ಆರ್.ಎಫ್.ಓ ಸಂಜೀವ್ ಸಂಸುದ್ದಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.