Breaking News

“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ


ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು, ಬೃಹತ್ ಬೈಕ್ ರ್ಯಾಲಿ-ರೋಡ್ ಶೋ. ಕೇಸರಿಮಯವಾದ ಮೂಡಲಗಿ ಪಟ್ಟಣ

    ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಾಕ್ಷಾತಃ ದೇವರಂತೆ ಕಾಣುತ್ತಾರೆ. ಅಷ್ಟೊಂದು ದೈವಿ ಸಂಕಲ್ಪ ಅವರಲ್ಲಿದೆ. ಹೀಗಾಗಿಯೇ ಜಗತ್ತಿನ ಹಲವಾರು ರಾಷ್ಟçಗಳು ಭಾರತದತ್ತ ಆಕರ್ಷಿಸಲು ಕಾರಣವಾಗಿದೆ. ಮೋದಿಯವರು ವಿಶ್ವಗುರುವಾಗಿ ಕಾಣತೊಡಗಿದ್ದಾರೆಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

   ರವಿವಾರದಂದು ಸಂಜೆ ಪಟ್ಟಣದ ಕಲ್ಮೇಶ್ವರ ವೃತ್ತದ ಬಳಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.

    ೨೦೦೪ ರಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ, ಸಚಿವನಾಗಿ ಈಗ ಕೆಎಮ್‌ಎಫ್ ಅಧ್ಯಕ್ಷನಾಗಿ ರೈತರ ಸೇವೆ ಮಾಡುತ್ತಿದ್ದೇನೆ. ಎಲ್ಲ ಸಮಾಜಗಳು, ಎಲ್ಲ ಧರ್ಮಿಯರು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನನ್ನ ಮೇಲೆ ಅಪಾರ ನಂಬಿಕೆಯನ್ನಿಟ್ಟು ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ೨೦೦೪ರ ಚುನಾವಣೆಯಲ್ಲಿ ಮೊದಲ ಬಾರಿ ಶಾಸಕನಾಗುವಂತೆ ಬೆಂಬಲಿಸಿ ಆಶೀರ್ವಾದ ಮಾಡಿದ ಜನ ಸುಮಾರು ೪ಅವಧಿಗೆ ಐದು ಬಾರಿ ಶಾಸಕನಾಗುವ ಸೌಭಾಗ್ಯವನ್ನು ಒದಗಿಸಿಕೊಟ್ಟಿದ್ದಾರೆ. ಅಂದಿನಿಂದ ಪ್ರಾರಂಭವಾದ ನಮ್ಮ ಸಂಬಂಧಗಳು ಒಂದೇ ಕುಟುಂಬದಂತೆ ಸಾಗುತ್ತಿವೆ. ಜನ ಯಾವತ್ತೂ ನನ್ನನ್ನು ಶಾಸಕನನ್ನಾಗಿ ನೋಡಲಿಲ್ಲ. ಬದಲಿಗೆ ತಮ್ಮ ಪರಿವಾರದ ವ್ಯಕ್ತಿಯಂತೆ ನೋಡುತ್ತ ಸಂಬಂಧಗಳಿಗೆ ಸಾಕ್ಷಿಕರಿಸಿದ್ದಾರೆ. ಇಂತಹ ಜನರನ್ನು ಪಡೆದಿರುವ ನಾನೇ ಧನ್ಯ. ಅರಭಾವಿ ಕ್ಷೇತ್ರದ ಜನರಿಗೆ ಎಷ್ಟೇ ನಮಿಸಿದರೂ ಸಾಲದು. ಪ್ರೀತಿ ವಿಶ್ವಾಸಕ್ಕೆ ಸದಾ ಚಿರ ಋಣಿಯಾಗಿರುವೆ. ಅದಕ್ಕಾಗಿಯೇ ನಾನು ನಮ್ಮ ಜನರನ್ನು ದೇವರು ಎಂದೇ ಕರೆಯುತ್ತಿದ್ದೇನೆ ಎಂದು ಹೇಳಿದರು.

    ಈ ಭಾಗದಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಧಾರ್ಮಿಕ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಸಂಕಲ್ಪದಿಂದ ಸರಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಅದಕ್ಕಾಗಿಯೇ ನಮ್ಮ ಮೂಡಲಗಿ ವಲಯದಲ್ಲಿ ೫೦ ಸಾವಿರಕ್ಕೂ ಅಧಿಕ ಮಕ್ಕಳು ಸರಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ವಲಯವು ಕೂಡ ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

   ೨೦೦೪ರಕ್ಕಿಂತ ಮುಂಚೆ ನಮ್ಮ ರೈತರಿಗೆ ಫೆಬ್ರುವರಿ ತಿಂಗಳೊಳಗೆ ಮಾತ್ರ ಆಯಕಟ್ಟಿಗೆ ನೀರು ಲಭಿಸುತ್ತಿತ್ತು. ಇದರಿಂದ ರೈತರಿಗೆ ನೀರೇ ಬಂಗಾರವಾಗಿತ್ತು. ಹಿಡಕಲ್ ಜಲಾಶಯದಿಂದ ನಮ್ಮ ಟೇಲ್ ಎಂಡ್ ರೈತರಿಗೆ ಎಪ್ರೀಲ್ ತಿಂಗಳತನಕ ನೀರು ಹರಿಯುವಂತೆ ಕ್ರಮಕೈಗೊಂಡಿದ್ದೇನೆ. ಇದರಿಂದ ಜಿಎಲ್‌ಬಿಸಿ ಮತ್ತು ಜಿಆರ್‌ಬಿಸಿ ರೈತರು ತಮ್ಮ ಕೃಷಿ ಭೂಮಿಗಳಿಗೆ ನೀರು ಹಾಯಿಸುತ್ತ, ಈಗ ಬಂಗಾರದಂತಹ ಬೆಳೆಗಳನ್ನು ತೆಗೆಯುತ್ತಿದ್ದಾರೆ. ಕುಡಿಯುವ ನೀರು ಸಹ ದೊರಕುತ್ತಿದೆ. ಕ್ಷೇತ್ರದ ಎಲ್ಲ ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ದೊರಕಿಸಿಕೊಡಲು ಜೆಜೆಎಮ್ ಯೋಜನೆಯಡಿ ೩೧೨ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪ್ರತಿ ಕುಟುಂಬಕ್ಕೂ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಲಾಗುತ್ತಿದೆ ಎಂದು ಹೇಳಿದರು.

   ಚುನಾವಣೆ ಬಂತೆಂದರೆ ವಿವಿಧ ಪಕ್ಷಗಳ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಟೀಕೆ ಟಿಪ್ಪಣಿಗಳನ್ನು ಮಾಡುತ್ತಲೇ ಇರುತ್ತಾರೆ. ಯಾವ ಟೀಕೆಗಳಿಗೂ ಉತ್ತರಿಸಬೇಡಿ, ನಮ್ಮದು ಅಭಿವೃದ್ಧಿಯೊಂದೇ ಮೂಲ ಮಂತ್ರವಾಗಿದೆ. ಒಳ್ಳೆಯ ಕೆಲಸ ಮಾಡುವವರೆಗೆ ಬೆಂಬಲ ನೀಡಿ ಎಂದು ಹೇಳಿದ ಅವರು, ಎಪ್ರೀಲ್-ಮೇ ತಿಂಗಳಲ್ಲಿ ಜರುಗುವ ಚುನಾವಣೆಯಲ್ಲಿ ವಿರೋಧಿಗಳು ಎಷ್ಟೇ ವದಂತಿಗಳನ್ನು ಹಬ್ಬಿಸುತ್ತಿದ್ದರೂ ನನ್ನದೇ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ವಿವರಿಸಿದರು. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಚ್ಚಿನ ಮತಗಳ ಮುನ್ನಡೆಯೊಂದಿಗೆ ಆಯ್ಕೆ ಮಾಡುವಂತೆ ಕೋರಿದರು.

   ಬೃಹತ್ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಮಾತನಾಡಿ, ಮುಖ್ಯಮಂತ್ರಿಗಳು ಇಡೀ ರಾಜ್ಯದ ಎಲ್ಲ ವರ್ಗಗಳು ಮೆಚ್ಚುವ ರೀತಿಯಲ್ಲಿ ಉತ್ತಮ ರೈತಪರ ಬಜೆಟನ್ನು ಮಂಡಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರಿಗೆ ರಾಜಾಹುಲಿ ಎಂದ ಅವರು ಕರುನಾಡು ಕಂಡ ಕರ್ಣ ಎಂದು ಶ್ಲಾಘಿಸಿ, ಇಡೀ ರಾಜ್ಯದಲ್ಲಿಯೇ ಬಾಲಚಂದ್ರ ಜಾರಕಿಹೊಳಿ ಅವರನ್ನು ಅತಿಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲಪಡಿಸುವಂತೆ ಮನವಿ ಮಾಡಿದರು. ಮೂಡಲಗಿಯಲ್ಲಿ ನಡೆದಿರುವ ವಿಜಯ ಸಂಕಲ್ಪ ಯಾತ್ರೆಯೂ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಹ ದಾಖಲೆಯ ಯಾತ್ರೆಯಾಗಿದೆ ಎಂದು ಗುಣಗಾನ ಮಾಡಿದರು.

   ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯ್ಕ, ವಿಧಾನ ಪರಿಷತ ಮಾಜಿ ಅರುಣ ಶಹಾಪೂರ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ವಿವೇಕ ಡಬ್ಬಿ, ಮಲ್ಲಿಕಾರ್ಜುನ ಬಾಳಿಕಾಯಿ, ಮಲ್ಲಿಕಾರ್ಜುನ ಮಾದನ್ನವರ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಓಬಿಸಿ ಮೋರ್ಚಾ ಕರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಜೆಪಿಯ ರಾಜ್ಯ, ಜಿಲ್ಲಾ ಮತ್ತು ಮಂಡಲ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

   

    *೪೨ಕಿಮೀ ಸಂಚರಿಸಿದ ಬೃಹತ್ ಬೈಕ್ ರ‍್ಯಾಲಿ* ಗೋಕಾಕ ಎನ್‌ಎಸ್‌ಎಫ್‌ದಿಂದ ಆರಂಭವಾದ ಬೃಹತ್ ಬೈಕ್ ರ‍್ಯಾಲಿ ಲೋಳಸೂರ, ಸಂಗನಕೇರಿ, ಕಲ್ಲೋಳ್ಳಿ, ನಾಗನೂರ, ಮೂಡಲಗಿ ಮೂಲಕ ಗುರ್ಲಾಪೂರ ಕ್ರಾಸ್ ವರೆಗೆ ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ಬೈಕಗಳು ರ‍್ಯಾಲಿಯು ಜನಮನ ಸೆಳೆಯಿತು. ಸುಮಾರು ಎರಡು ಗಂಟೆಕಾಲ ಗೋಕಾಕ-ಮೂಡಲಗಿ ಮುಖ್ಯ ರಸ್ತೆಯು ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಜೊತೆಗೆ ವಿಜಯ ಸಂಕಲ್ಪ ರಥ ಯಾತ್ರೆೆ ಬೃಹತ್ ರೋಡ್ ಶೋ ಜರುಗಿತು. ಮೂಡಲಗಿಯ ಎಸ್‌ಎಸ್‌ಆರ್ ಕಾಲೇಜಿನಿಂದ ಆರಂಭವಾದ ರೋಡ್ ಶೋ ಕಲ್ಮೇಶ್ವರ ವೃತ್ತದ ಬಳಿ ಸಾರ್ವಜನಿಕ ಸಮಾರಂಭವಾಗಿ ಮುಕ್ತಾಯವಾಯಿತು. ಸಕಲ ವಾದ್ಯವೃಂದಗಳೊಂದಿಗೆ ರಥ ಯಾತ್ರೆಯಲ್ಲಿದ್ದ ಗಣ್ಯರಿಗೆ ಅದ್ದೂರಿ ಸ್ವಾಗತ ನೀಡಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ