ಗೋಕಾಕ: ಬೆಟ್ಟಿಂಗ್ನಲ್ಲಿ ಯಾವ ಟೀಮ್ನಲ್ಲಿ ಯಾರು ಹೆಚ್ಚು ರನ್ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೆ, ಯಾವ ಟೀಮ್ ಕೊನೆ ಹಂತಕ್ಕೆ ಬರಲಿದೆ, ಸೇರಿದಂತೆ ಪ್ರತಿ ಬಾಲ್, ರನ್ ಮೇಲೆಯೂ ಬಾಜಿ ಕಟ್ಟುವುದಕ್ಕೆ ಭಾರಿ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಕ್ರಿಕೆಟ್ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆ ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇನ್ನೇನು ಆರಂಭವಾಗುತ್ತಿದ್ದು, ಇದರ ಜತೆಜತೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೆಟ್ಟಿಂಗ್ ಕೂಡಾ ಜೋರಾಗುವ ಸಾಧ್ಯತೆ ಇದೆ.
ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಬೆಟ್ಟಿಂಗ್ ಆಟ ಜೋರಾಗುವ ಸಾಧ್ಯತೆ ಹೆಚ್ಚಾಗಿದ್ದು ಕೇವಲ ನಗದು ಮೂಲಕ ನಡೆಯುತ್ತಿದ್ದ ಬೆಟ್ಟಿಂಗ್, ಆನ್ಲೈನ್ ಮೂಲಕವೂ ನಡೆಯುವಂತಾಗಿದೆ.
ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಮಾಡಿಕೊಂಡು ಬೆಟ್ಟಿಂಗ್ ನಡೆಸಿ, ನಂತರ ಆನ್ಲೈನ್ ಅಪ್ಲಿಕೇಷನ್ ಮೂಲಕ ಹಣದ ವಹಿವಾಟು ನಡೆಸಿದ್ದರು ಎಂಬ ಮಾಹಿತಿ ಇದೆ.
ಗೋಕಾಕದಲ್ಲೂ ನಂಟು? : ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಸೇರಿದಂತೆ ಅನೇಕ ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗೆ ಬೆಟ್ಟಿಂಗ್ ದಂಗೆ ನಡೆಯುತ್ತಿದೆ, ಪೋಲಿಸರು ಸಾಕಷ್ಟು ಪ್ರಕರಣ ದಾಖಲಿಸಿಕೊಂಡಿದ್ದರು ಸಹಿತ ಈ ದಂಧೆ ನಿಂತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಸ್ ವೇಳೆಗೆ ಆರಂಭ: ನಗದು ವರ್ಗಾವಣೆ ಆ್ಯಪ್ಗಳು ಬೆಟ್ಟಿಂಗ್ಗೆ ತುಂಬಾ ಅನುಕೂಲ ಮಾಡಿಕೊಟ್ಟಿದೆ. ದೂರದ ಊರುಗಳಲ್ಲಿರುವವರ ಜತೆಗೂ ಬೆಟ್ಟಿಂಗ್ ಸುಲಭವಾಗಿ ನಡೆಯುತ್ತಿದೆ. ಹಿಂದೆ ಪಂದ್ಯದ ಸೋಲು ಗೆಲುವಿಗೆ ಬೆಟ್ಟಿಂಗ್ ನಡೆಯುತ್ತಿತ್ತು. ಆದರೆ ಇದೀಗ ಬದಲಾಗಿ ಟಾಸ್ ಸೇರಿದಂತೆ ಪಂದ್ಯದ ಪ್ರತಿ ಹಂತದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ಇದರಿಂದ ಹಣದ ವಹಿವಾಟು ಹೆಚ್ಚಾಗುವ ಸಾಧ್ಯತೆ ಇದೆ.
ರನ್ಗೂ ಹಣದ ಹೊಳೆ: ಬೆಟ್ಟಿಂಗ್ನಲ್ಲಿ ಯಾವ ಟೀಮ್ನಲ್ಲಿ ಯಾರು ಹೆಚ್ಚು ರನ್ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೆ, ಯಾವ ಟೀಮ್ ಕೊನೆ ಹಂತಕ್ಕೆ ಬರಲಿದೆ, ಸೇರಿದಂತೆ ಪ್ರತಿ ಬಾಲ್, ರನ್ ಮೇಲೆಯೂ ಬಾಜಿ ಕಟ್ಟುವುದಕ್ಕೆ ಭಾರಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೊಲೀಸ್ ಕಟ್ಟೆಚ್ಚರ ವಹಿಸಬೇಕಾಗಿದೆ : ಬೆಟ್ಟಿಂಗ್ ದಂಧೆ ಸಂಪೂರ್ಣ ನಿಲ್ಲಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡರು ಸಹಿತ ನಿಲ್ಲದ ಬೆಟ್ಟಿಂಗ್ ದಂಧೆ, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಪೊಲೀಸರು ದಾಳಿ ಮಾಡಿ, ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದರೂ ಜೂಜಿಗೆ ಕಡಿವಾಣ ಬಿದ್ದಿಲ್ಲ. ಬುಕ್ಕಿಗಳು ಹೊರ ರಾಜ್ಯ ಗೋವಾ ಮತ್ತು ಮಹಾರಾಷ್ಟ್ರ ಹಾಗೂ ಅನೇಕ ಹೊರರಾಜ್ಯಗಳಿಂದ ಮೂಲ ಕೇಂದ್ರ ಸ್ಥಾನದಿಂದಲೇ ನಿತ್ಯ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಇದರಿಂದ ಕ್ರಿಕೆಟ್ ಜೂಜಿನ ಹಿಂದಿರುವ ಜಾಲ ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಯುವಕರೇ ಎಚ್ಚರ: ಬೆಟ್ಟಿಂಗ್ ಪ್ರಸ್ತುತ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕ್ರಿಕೆಟ್, ಕಬಡ್ಡಿ, ಫುಟ್ಬಾಲ್ ಸೇರಿ ಇತರೆ ಕ್ರೀಡೆಗಳಿಗೆ ಬೆಟ್ಟಿಂಗ್ ಹರಡಿದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ಗಾಗಿ ಸಾಲ ಮಾಡಿ, ಅದರಲ್ಲಿ ತೊಡಗಿಕೊಳ್ಳುತ್ತಿದ್ದು, ನಂತರ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಕಡೆಗೆ ಹೋಗುತ್ತಿದ್ದಾರೆ. ಕೆಲವರು ತಮ್ಮ ಊರುಗಳನ್ನು ಬಿಡುತ್ತಿದ್ದಾರೆ. ಯುವಕರು ಆದಷ್ಟು ಬೆಟ್ಟಿಂಗ್ನಿಂದ ದೂರ ಉಳಿದರೆ ಒಳಿತು ಎಂಬುದು ನಮ್ಮ ಕಳಕಳಿಯಾಗಿದೆ.
ಯುವಕರೇ ಟಾರ್ಗೆಟ್: ಜಾಲವನ್ನು ನಗರದಿಂದ ಗ್ರಾಮೀಣ ಭಾಗಕ್ಕೂ ವಿಸ್ತಾರಿಸಿಕೊಂಡಿರುವ ಬುಕ್ಕಿಗಳು ಒಂದೊಂದು ಹಳ್ಳಿಯಲ್ಲೂ ತಮ್ಮದೇ ಆದ ನೆಟ್ವರ್ಕ್ ಉಳ್ಳ ಯುವಕರನ್ನು ಟಾರ್ಗೆಟ್ ಮಾಡಿ, ಅವರ ಮೂಲಕ ಜೂಜು ನಡೆಸುತ್ತಾರೆ.
ಇನ್ನೇನು ನಾಳೆಯಿಂದ ಆರಂಭವಾಗುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಸಹಿತ ಬೆಟ್ಟಿಂಗ್ ದಂಧೆಗಳು ನಡೆಯುವ ಸಾಧ್ಯತೆಗಳಿದ್ದು, ಪೋಲಿಸ್ ಇಲಾಖೆ ಹಾಗೂ ಯುವಕರ ಪೋಷಕರು ಸಹಿತ ಎಚ್ಚರ ವಹಿಸಿ ಈ ದಂಧೆಗೆ ಕಡಿವಾಣ ಹಾಕುತ್ತಾರಾ ಎಂದು ಕಾಯ್ದು ನೋಡಬೇಕಾಗಿದೆ.