ಗೋಕಾಕ ಸೆ 10 : ಸ್ವಾತಂತ್ರ್ಯಕ್ಕಿಂತ ಪೂರ್ವದಿಂದಲೂ ಕಾರ್ಯನಿರತ ಪತ್ರಕರ್ತರ ಸಂಘ ಜನರ ಧ್ವನಿಯಾಗಿ ಕಾರ್ಯನಿರ್ವಸುತ್ತಿದೆ ಎಂದು ಗೋಕಾಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದ ಗೌರಾವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದಿಂದ ಮಾನ್ಯತೆ ಪಡೆದ ಏಕೈಕ ಪತ್ರಕರ್ತರ ಸಂಘವಾಗಿ ನೈಜ ವರದಿಗಳೊಂದಿಗೆ ಜನರ ವಿಶ್ವಾಸಗಳಿಸಿದೆ. ಸಂಘದಿಂದ ಜಿಲ್ಲಾ ಗೌರಾವಾಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸದಸ್ಯರುಗಳಿಗೆ ಶಿಕ್ಷಣ , ಆರೋಗ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಾ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಸುತ್ತಿದೆ. ನಾವೆಲ್ಲರೂ ಸಂಘಟಿತರಾಗಿ ಈ ಕಾರ್ಯಕ್ಕೆ ಸಹಕಾರ ನೀಡೋಣ . ಇಂದು ಹೆಚ್ಚಾಗುತ್ತಿರುವ ಬ್ಲ್ಯಾಕ್ ಮೇಲ್ ವ್ಯಕ್ತಿಗಳಿಂದ ದೂರವಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಇಂದು ಎಲ್ಲಾ ವ್ಯವಸ್ಥೆಗಳು ಕೆಟ್ಟಿದ್ದು, ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಿದರೆ ಸುಧಾರಣೆ ಸಾಧ್ಯ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ರಂಗ ವಾಸ್ತವಿಕತೆಯನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವಂತೆ ಹೇಳಿದರು.
ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಘಟಕದ ಸೂರ್ಯಕಾಂತ ಪಾಟೀಲ, ದಿಲೀಪ್ ಮಜಲಿಕರ, ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ, ಎ ಎಸ್.ಐ ಮಹಾಲಿಂಗ ನಂದೇರಾ, ಹಿರಿಯ ಪತ್ರಕರ್ತ ಚಂದ್ರಶೇಖರ್ ಕೊಣ್ಣೂರ ಇದ್ದರು.