ಹುಕ್ಕೇರಿ: ನಿರಂತರ ಅಧ್ಯಯನದಿಂದ ಯಶಸ್ಸು ಸಾಧಿಸಬಹುದು. ಬಡತನಕ್ಕೂ ಮತ್ತು ಶಿಕ್ಷಣಕ್ಕೂ ಸಂಬಂಧವಿಲ್ಲ. ಆತ್ಮವಿಶ್ವಾಸ ಇದ್ದಿದ್ದೇ ಆದರೆ ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಪಾಶ್ಚಾಪೂರ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಬುದ್ಧಿವಂತಿಕೆಯನ್ನು ಇಂದಿನ ಸಮಾಜ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಹುಟ್ಟಿನಿಂದಲೇ ಯಾರೂ ಜೀನಿಯಸ್ ಅಲ್ಲ, ಕಾರ‍್ಯ ಸಾಧನೆಯಿಂದ ನಾವೂ ಜೀನಿಯಸ್ ಆಗಬಹುದು. ಸತತ ಪ್ರಯತ್ನ ಕಾರ‍್ಯಗಳಿಂದ ಗುರಿ ಮುಟ್ಟಬಹುದು ಎಂದು ಸಲಹೆ ನೀಡಿದರು.
ಬುದ್ದ, ಬಸವ, ಡಾ. ಬಾಬಾ ಸಾಹೇಬ್ ಅಂಬೇಡರ್ ಅವರ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಂಡು ಸಮಾಜಕ್ಕೆ ವಿದ್ಯಾರ್ಥಿಗಳು ಬೆಳಕಾಗಬೇಕು. ವಿದ್ಯಾವಂತರಾಗಿ ಪ್ರಗತಿ ಕಂಡಾಗ ಸಮಾಜವನ್ನು, ನಮ್ಮ ಪ್ರಗತಿಗೆ ಪ್ರೋತ್ಸಾಹ ನೀಡಿದವನ್ನು ಮರೆಯಬಾರದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಾಶ್ಚಾಪೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗುಮಚಿನಮರಡಿ ಗ್ರಾಮದಲ್ಲಿ ಜಲ್ ಜೀವನ ಮಷಿನ್ ಯೋಜನೆಯಡಿ 1.5 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಆದಾಗ ಮಾತ್ರ ಗ್ರಾಮಗಳ ಪ್ರಗತಿ ಸಾಧ್ಯವಿದೆ. ಕಾರಣ ಎಲ್ಲ ಕಾಮಗಾರಿಗಳ ಮೇಲೆ ಸಾರ್ವಜನಿಕರು ಗಮನ ಇಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಜಲ್ ಮಕಾಂದರ, ಪಾಚ್ಛಾಪೂರ ಗ್ರಾಪಂ ಅಧ್ಯಕ್ಷ ಸರಸ್ವತಿ ಕುರುಬರ, ಭೀಮಶಪ್ಪಾ ನಿಟನಾಳ, ಸಾಬುರಾವ್ ದೇಸಾಯಿ, ಬಸವರಾಜ ನಾಯಕ, ಮಂಜುಗೌಡ ಪಾಟೀಲ್, ಅಬ್ದುಲ್ ಗಣಿ ದರಗಾ, ಸರ್ಪರಾಜ್ ಪೀರಜಾದೆ, ಅಮರ ಹುಮನಾಬಾದಿಮಠ, ವಿನೋದ ಹುಮನಾದಿಮಠ, ವಂದನಾ ಬಸ್ಸನಾಯಿಕ, ಸಿದ್ದಪ್ಪಾ, ಲಗಮಪ್ಪ ನಾಯಕ ಸೇರಿದಂತೆ ಇತರರು ಇದ್ದರು.