ಗೋಕಾಕ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಶೂನ್ಯ ಸಂಪಾದನ ಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಶುಕ್ರವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೃಹತ್ ತಿರಂಗಾ ಯಾತ್ರೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವಿಭಾಗೀಯ ಸಂಘ ಸಂಚಾಲಕ ಎಂ.ಡಿ ಚುನಮರಿ
ಚಾಲನೆ ನೀಡಿದರು. ನಗರದ ಚನ್ನಬಸವೇಶ್ವರ ವಿದ್ಯಾಪೀಠದಿಂದ ಆರಂಭಗೊಂಡ ಬೃಹತ್ ತಿರಂಗಾ ಯಾತ್ರಾ ಹನುಮಂತ ದೇವರ ಗುಡಿ ಮಾರ್ಗವಾಗಿ ಭಾಪನಾ ಕೂಟ್, ಶೆಟ್ಟಿ ಕೂಟ್, ಅಪ್ಸರಾ ಕೂಟ್, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದ ವರೆಗೂ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಭಾರತ್ ಮಾತಾ ಕೀ ಜೈ ಎನ್ನುವ ಜಯಘೋಷ ಕೂಗಿ ತಿರಂಗಾ ಯಾತ್ರೆ ಮೆರಗು ಹೆಚ್ಚಿಸಿದರು.
ಇದೇ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಗಡಿಕಾಯುವ ಯೋಧರನ್ನು ನಾವು ನಿತ್ಯ ಸ್ಮರಣೆ ಮಾಡಬೇಕು ಎಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಕರೆ ನೀಡಿ , ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದಂತೆ ಅ 13 ರಿಂದ 15 ರವರೆಗೆ ಪ್ರತಿಮನೆಯಲ್ಲಿ ತಿರಂಗಾ ಧ್ವಜ ಹಾರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.
ತಿರಂಗಾಯಾತ್ರೆಯಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಬಿಇಒ ಜಿ.ಬಿ.ಬಳಗಾರ, ಪೌರಾಯುಕ್ತ ಶಿವಾನಂದ ಹಿರೇಮಠ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ , ಎಂ,ವಾಯ್ ಹಾರುಗೇರಿ, ನಾರಾಯಣ ಮಠಾಧಿಕಾರಿ, ಜಯಾನಂದ ಮುನ್ನವಳ್ಳಿ, ಸದಾಶಿವ ಗುದಗಗೋಳ, ಮಹಾಂತೇಶ ತಾವಂಶಿ, ಭೀಮಶಿ ಭರಮನ್ನವರ, ಬಸವರಾಜ ಖಾನಪ್ಪನವರ, ಮಲ್ಲಿಕಾರ್ಜುನ ಈಟಿ, ಸಾದಿಕ ಹಲ್ಯಾಳ, ಸಂಜು ಹತ್ತೀಕಟಗಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.