ಹುಕ್ಕೇರಿ: ಬಸವಣ್ಣವರ ಕ್ರಾಂತಿಯಿಂದ 12ನೇ ಶತಮಾನದಲ್ಲೇ ಮಹಿಳೆಯರ ಜೀವನದಲ್ಲಿ ಕೆಲ ಬದಲಾವಣೆಗಳಾದವು, ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ತರುವ ಮೂಲಕ ಮಹಿಳೆಯರ ಪ್ರಗತಿಗಾಗಿ ಅನೇಕ ಕಾನೂನುಗಳನ್ನು ತಂದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಪಾಚ್ಛಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾದೇವಿ ಮೆಮೋರಿಯಲ್ ನೂತನ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಎಲ್ಲಾ ರಂಗಗಳಲ್ಲಿಯೂ ಇಂದು ಮಹಿಳೆಯರು ಕೆಲಸ ಮಾಡುತ್ತಿದ್ದು, ಅವರನ್ನು ಪಾಲಕರು ಸೇರಿದಂತೆ ಸಮಾಜದಿಂದಲೂ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಿದೆ. ಮಹಾದೇವಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಉಚಿತ ಸೇವೆ ಕಲ್ಪಿಸುವುದಾಗಿ ಇಲ್ಲಿನ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಈ ಒಂದು ಕಾರ್ಯ ಹೀಗೆ ಮುಂದುವರೆಯಿಲಿ ಎಂದು ಹರಿಸಿದರು.
ಎಲ್ಲ ಸೇವೆಗಳನ್ನು ಒಳಗೊಂಡ ಆಸ್ಪತ್ರೆ ಇಂದು ಪಾಚ್ಛಾಪೂರ ಗ್ರಾಮದಲ್ಲಿಉದ್ಘಾಟನೆ ಆಗಿದ್ದು ಸಂತಸ ತಂದಿದ್ದು, ಈ ಆಸ್ಪತ್ರೆ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲಿ ಎಂದ ಅವರು, ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ಸಲ್ಲಿಸಲು ವೈದ್ಯರು ಲಭ್ಯವಿದ್ದಾರೆ ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರ ಮನಸ್ಥಿತಿ ಬದಲಾಗಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ದುಡ್ಡು ಮಾಡುವುದ್ದಕ್ಕಾಗಿ ಪೈಪೋಟಿ ಮಾಡುತ್ತಿದ್ದು, ಈ ವ್ಯವಸ್ಥೆ ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿಯೂ ಒಳ್ಳೆಯ ಶಿಕ್ಷಣ ದೊರಕುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂದು ಕರೆ ನೀಡಿದರು.
ಪಾಚ್ಛಾಪೂರ ಗ್ರಾಮದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಪಾಚ್ಛಾಪೂರ ಉಜ್ಜೇಶ್ವರ ಸಂಸ್ಥಾನ ಹಿರೇಮಠದ ಶ್ರೀ. ಷ.ಬ್ರ. ಔಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ. ಮ.ನಿ.ಪ್ರ. ಅಮರೇಶ್ವರ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಪಾಚ್ಛಾಪೂರ ಗ್ರಾಪಂ ಅಧ್ಯಕ್ಷೆ ಸರಸ್ವತಿ ಕುರುಬರ, ಅಮರ ಮಹಾಜನಶೆಟ್ಟಿ, ಆಮಲಖಾನ ಎ. ದೇಸಾಯಿ, ಡಾ. ಆನಂದ ಅಥಣಿ, ಡಾ. ವಿನಾಯಕ ದ. ಹಜ್ಜೆ ಸೇರಿದಂತೆ ಇತರರು ಇದ್ದರು.