ಅಥಣಿ: ವಾಲಿಬಾಲ್, ಕಬಡ್ಡಿ, ಖೋಖೊ ಮುಂತಾದ ದೇಶಿ ಕ್ರೀಡೆಗಳತ್ತ ಯುವಕರು ಹೆಚ್ಚಿನ ಒಲವು ತೋರಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಶಿವಣೂರ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಸಂಸ್ಕಂತಿ ಅಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಇಂಥ ಗ್ರಾಮೀಣ ಕ್ರೀಡೆಗಳು ನಮ್ಮ ಜನಜೀವನದ ಅವಿಭಾಜ್ಯ ಅಂಗವಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಸಮಾಜದ ಪ್ರೋತ್ಸಾಹವೂ ಅಗತ್ಯವಾಗಿದೆ ಎಂದರು.
ಕ್ರಿಕೆಟ್ ಅಬ್ಬರದಲ್ಲಿ ಮರೆಯಾಗುತ್ತಿರುವ ದೇಶಿ ಕ್ರೀಡೆಗಳನ್ನು ಉಳಿಸಿ, ಬೆಳೆಸಬೇಕಾಗಿದೆ. ಕಬಡ್ಡಿ, ಕುಸ್ತಿ, ಖೊಖೋ, ಚಿಣ್ಣಿದಾಂಡು, ಲಗೋರಿಯಂಥ ದೇಶಿ ಆಟಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡುವ ಮೂಲಕ ಅವುಗಳನ್ನು ಬೆಳೆಸಬೇಕು. ಆಟದಲ್ಲಿ ಸೋಲು ಗೆಲವಿಗಿಂತ ಸಹಭಾಗಿತ್ವ ಮುಖ್ಯವಾಗಿದೆ ಎಂದು ತಿಳಿಸಿದರು.
ಪರಮಪೂಜ್ಯ ಸಿದ್ದ ಯೋಗಿ ಅಮರೇಶ್ವರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ, ರಮೇಶ ಸಿಂದಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾವ್ ಸವನೂರ್, ವಿನಾಯಕ ಬಾಗಡೆ, ಚಂದ್ರಕಾಂತ್ ಇಮ್ಮಡಿ, ಓಂ ಪ್ರಕಾಶ್ ಪಾಟೀಲ್, ಬಾಬುರಾವ್ ವಾಗಮೊಡೆ, ತಮ್ಮಣ್ಣ ಪೂಜಾರಿ, ಸತ್ಯಪ್ಪ ಭಾಗ್ಯನಗರ್, ರವಿ ಗಸ್ತಿ, ಸಂತೋಷ್ ಚೋರ್ಮೂಲೆ, ಕಿರಣ್ ಬೆಂಡಿಗೇರಿ, ವಿಠ್ಠಲ ಪೂಜಾರಿ ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು, ಜಾತ್ರಾ ಕಮಿಟಿ ಪದಾಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.