ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಕೊನೆಗೂ ಬಂಧಿಸಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿಯನ್ನು ಸಿಐಡಿ ತಂಡ ಬಂಧಿಸಿದೆ.
ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿದ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ಕಳೆದ ಏ.ರಂದು ಎಫ್ ಐಆರ್ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ದಿವ್ಯಾಳನ್ನು ಕೊನೆಗೂ ಬಂಧಿಸಲಾಗಿದೆ.
ಕಳೆದ ಎರಡುವರೆ ವಾರಗಳಿಂದ ನಾಪತ್ತೆಯಾಗಿದ್ದ ದಿವ್ಯಾ ಬಂಧನ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಸಿಐಡಿ ಡಿಜಿಪಿ ಪಿ.ಎಸ್.ಸಂಧು ಕಲಬುರಗಿಗೆ ಆಗಮಿಸಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಪುಣೆಯ ಹೊಟೇಲೊಂದರದಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಸಿಐಡಿ ತಂಡ ದಾಳಿ ನಡೆಸಿ ಬಂಧಿಸಿದೆ.
ದಿವ್ಯಾಗೆ ಆಶ್ರಯ ನೀಡಿದ್ದ ಸೊಲ್ಲಾಪುರ ಉದ್ಯಮಿ ಸುರೇಶ ಹಾಗೂ ಜ್ಞಾನಜ್ಯೋತಿ ಶಾಲೆಯ ಮುಖ್ಯೋಧ್ಯಾಪಕ ಕಾಶೀನಾಥ್, ಮೇಲ್ವಿಚಾರಕರಾದ ಅರ್ಚನಾ, ಸುನಂದಾ ಹಾಗೂ ಅಕ್ರಮವಾಗಿ ಪರೀಕ್ಷೆ ಬರೆದ ಶಾಂತಾಬಾಯಿಯನ್ನು ಸೇರಿ ಆರು ಜನರನ್ನು ಬಂಧಿಸಲಾಗಿದೆ. ಗುರುವಾರದವರೆಗೂ 17 ಆರೋಪಿಗಳನ್ನು ಬಂಧಿಸಲಾಗಿತ್ತು ಈಗ ಆರು ಆರೋಪಿಗಳನ್ಬು ಬಂಧಿಸುವುದರ ಮೂಲಕ ಸಂಖ್ಯೆ 23ಕ್ಕೆ ಏರಿದಂತಾಗಿದೆ.
ದಿವ್ಯಾ ಹಾಗರಗಿ ಬಂಧನ ವಿಳಂಬ ರಾಜಕೀಯವಾಗಿಯೂ ದೊಡ್ಡ ಚರ್ಚೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಷಾನೇಂದ್ರ ಪ್ರಕರಣದಲ್ಲಿ ಯಾರು ಎಷ್ಟೇ ದೊಡ್ಡವರಿರಲಿ ರಕ್ಣಿಸುವ ಪ್ರಶ್ನೆಯೇ ಇಲ್ಲ ಎಂದು ಪದೇ- ಪದೇ ಹೇಳಿದ್ದರೂ ಜತೆಗೆ ದಿವ್ಯಾ ಹಾಗರಗಿ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಹೇಳಿದ್ದರೂ ಬಂಧನವಾಗಿರಲಿಲ್ಲ. ಬಿಜೆಪಿ ನಾಯಕರು ಹಾಗೂ ಸಚಿವರು, ಶಾಸಕರು ಬಂಧನವಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಕೊನೆಗೂ ಈಗ ಬಂಧನವಾಗಿರುವುದರಿಂದ ಈಗ ಪ್ರಕರಣದಲ್ಲಿ ಯಾರ್ಯಾರ ಹೆಸರು ಹೊರ ಬರುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.