ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಕಾರ್ಯಕ್ರಮ
ಹುಕ್ಕೇರಿ: ಬಸವಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಮೂಢನಂಬಿಕೆ ವಿರೋಧ ಮಾಡುತ್ತಿದ್ದರು, ಹೀಗಾಗಿ ನೀವು ಮೂಢನಂಬಿಕೆಗಳನ್ನು ವಿರೋಧಿಸಿ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಹೊಂದಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ದೀನ ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಸಂವಿಧಾನ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ದೀನ ದಲಿತರು ಮಾತ್ರ ತಿಳಿದುಕೊಂಡರೆ ಸಾಲದು, ಎಲ್ಲಾ ಸಮಾಜದವರು ಸಂವಿಧಾನ ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ಈ ನಾಡಿನಲ್ಲಿ ಎಲ್ಲಾ ಸಮಾಜಗಳಿಗೆ ಸಮಾನವಾಗಿ ಬದುಕಲು ಸಂವಿಧಾನ ಅವಕಾಶ ನೀಡಿದ್ದು, ಎಲ್ಲರೂ ಸಂವಿಧಾನದ ಅಡಿಯಲ್ಲಿ ಸಾಗಬೇಕು. ಅಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಶಿಕ್ಷಣದ ಹಕ್ಕು, ರಾಜಕೀಯ ಮೀಸಲಾತಿ ನೀಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ದೇವದಾಸಿ ಪದ್ದತಿಯಿಂದ ಸಾಕಷ್ಟು ಮಹಿಳೆಯರ ಜೀವನ ಹಾಳಾಗಿದ್ದನ್ನು ನಾವು ನೋಡಿದ್ದೇವೆ. ಆದರೆ ಸಂವಿಧಾನ ಜಾರಿಯಾದ ನಂತರ ಇಂತಹ ಅನಿಷ್ಟ ಪದ್ದತಿಗಳಿಗೆ ಬ್ರೇಕ್ ಬಿದ್ದಿವೆ ಎಂದರು.
ಮಂಗಳವಾರ ಬೆಳಗ್ಗೆ 10.30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನ ಸೇವಾ ಸಂಸ್ಥೆ ಅಧ್ಯಕ್ಷ ಸುರೇಶ ತಳವಾರ, ಅನೇಕ ದಲಿತ ನಾಯಕರು, ಕನ್ನಡದ ಖ್ಯಾತ ಮಹಾ ನಾಯಕ ಧಾರಾವಾಹಿಯ ಅಂಬೇಡ್ಕರ್ ಪಾತ್ರದಾರಿ, ಬಾಲನಟ ಆಯುಧ ಭಾನುಶಲಿ ಹಾಗೂ ತಂಡದವರು ಇದ್ದರು.