ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಗಡಿ ಜಿಲ್ಲೆ ಬೆಳಗಾವಿ ಯಾವಾಗಲೂ ಸುದ್ದಿ ಮಾಡುವ ಕೇಂದ್ರ. ಜಿಲ್ಲೆಯ ಎಷ್ಟೋ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿವೆ. ಈ ರೀತಿಯ ಘಟನೆಗಳು ಜಿಲ್ಲೆಗೆ ಹೊಸದೇನಲ್ಲ.
ಅದರಲ್ಲೂ ಚುನಾವಣೆಗಳು ಬಂದಾಗ ಹಾಗೂ ಸರ್ಕಾರ ರಚಿಸುವ ವೇಳೆ ಯಾವ ರಾಜಕೀಯ ಪಕ್ಷಗಳೂ ಜಿಲ್ಲೆಯನ್ನು ಕಡೆಗಣಿಸುವುದಿಲ್ಲ. ಬದಲಾಗಿ ಮೊದಲ ಆದ್ಯತೆ ನೀಡುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಬೆಂಗಳೂರು ನಂತರ ಅತೀ ಹೆಚ್ಚು ಅಂದರೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವುದರಿಂದ ಸಹಜವಾಗಿಯೇ ಎಲ್ಲರ ಕಣ್ಣು ಜಿಲ್ಲೆಯ ಮೇಲೆ ನೆಟ್ಟಿರುತ್ತದೆ.
ರಾಜಕಾರಣದ ಮಾತು ಬಂದಾಗ ಬೆಳಗಾವಿ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿಯ ಹೊಂದಾಣಿಕೆ ರಾಜಕಾರಣ, ಕುಟುಂಬ ರಾಜಕಾರಣ ಬೇರೆ ಜಿಲ್ಲೆಗಳಿಗಿಂತ ವಿಭಿನ್ನ. ಇಲ್ಲಿಯ ಪ್ರಚಾರ ವೈಖರಿ, ಅಭ್ಯರ್ಥಿಗಳ ನಡೆ ವಿಭಿನ್ನ ಹಾಗೂ ಅಷ್ಟೇ ಕುತೂಹಲ. ಈ ರಾಜಕೀಯ ಶಕ್ತಿ ಕೇಂದ್ರದಲ್ಲೀಗ ನಿಧಾನವಾಗಿ ಮುಂಬರುವ ವಿಧಾನಸಭೆ ಚುನಾವಣೆ ತಾಲೀಮು ಸಹ ಆರಂಭವಾಗಿದೆ. ಅಭ್ಯರ್ಥಿಗಳ ಸ್ಪಷ್ಟ ಚಿತ್ರಣವಿಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ಆಕಾಂಕ್ಷಿಗಳು ಟಿಕೆಟ್ ಸಿಗುವ ವಿಶ್ವಾಸದಲ್ಲಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.
ಆಂತರಿಕ ಮನಸ್ತಾಪ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಲ್ಲೂ ಇವೆ. ಟಿಕೆಟ್‌ಗಾಗಿ ಒಬ್ಬರು ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿ ಜೋರಾಗಿದೆ. ಇದು ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಹೀಗಾಗಿ ಈಗಿನಿಂದಲೇ ಸಮಾಧಾನ ಪಡಿಸುವ ಪ್ರಯತ್ನ ಎರಡೂ ಪಕ್ಷಗಳಲ್ಲಿ ಕಾಣುತ್ತಿದೆ.
ಈಗಿನ ಬೆಳವಣಿಗೆಗಳ ಪ್ರಕಾರ ಬಿಜೆಪಿಯಲ್ಲಿ ಟಿಕೆಟ್ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಅಂತಹ ಸಮಸ್ಯೆ ಕಂಡಿಲ್ಲ. ಆದರೆ ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೈಲಹೊಂಗಲ, ಖಾನಾಪುರ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಹೆಚ್ಚು ಪೈಪೋಟಿ ಕಾಣುತ್ತಿದೆ. ಈ ಪಕ್ಷದಲ್ಲಿ ಸದ್ಯ ಯಾರೂ ಕ್ಷೇತ್ರ ಬದಲಾವಣೆ ಬಗ್ಗೆ ಮನಸ್ಸು ಮಾಡಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಚುನಾವಣೆ ತಯಾರಿ ಬಿರುಸಾಗಿದೆ. ಪಕ್ಷದ ಸಭೆಗಳು ನಡೆದಿದ್ದರೂ ಅದು ಒಂದೆರಡು ಕ್ಷೇತ್ರಗಳಿಗೆ ಸೀಮಿತವಾದಂತೆ ಕಾಣುತ್ತಿವೆ. ಹಾಲಿ ಶಾಸಕರು ಕ್ಷೇತ್ರ ಬದಲಾವಣೆಗೆ ಮನಸ್ಸು ಮಾಡಿಲ್ಲ.
ಬೆಳಗಾವಿ ಗ್ರಾಮೀಣ, ಉತ್ತರ, ಬೈಲಹೊಂಗಲ, ಖಾನಾಪುರ, ಚಿಕ್ಕೋಡಿಯಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ
ಬೆಳಗಾವಿ ದಕ್ಷಿಣ, ಉತ್ತರ, ಅರಭಾವಿ, ಸವದತ್ತಿ, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕುಡಚಿಯಲ್ಲಿ “ಕೈ’ ಗೊಂದಲ
ಹೊಸ ಮುಖಗಳಿಗೆ ಅವಕಾಶ? ಈಗಿನ ಬೆಳವಣಿಗೆ ಪ್ರಕಾರ ಬಿಜೆಪಿಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಒಂದಿಬ್ಬರು ಶಾಸಕರು ಟಿಕೆಟ್ ವಂಚಿತರಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಕಾಂಗ್ರೆಸ್‌ನಲ್ಲಿ ಸಹ ಕೆಲವು ಬದಲಾವಣೆಗಳು ಕಾಣಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಕಾಕ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರ ಹೊರತಾಗಿ ಬೇರೆ ಅಭ್ಯರ್ಥಿಯನ್ನು ಕಾಣುವ ಸಾಧ್ಯತೆಯಿದೆ.