ಜನ ಹಾಗೂ ಜಾನುವಾರಿಗಳಿಗೆ ಕುಡಿಯುವ ನೀರಿಗಾಗಿ 10 ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ
ಜಿಆರ್‌ಬಿಸಿಗೆ 2000 ಕ್ಯೂಸೆಕ್ಸ್, ಜಿಎಲ್‌ಬಿಸಿಗೆ 2400 ಕ್ಯೂಸೆಕ್ಸ್, ಸಿಬಿಸಿಗೆ 500 ಕ್ಯೂಸೆಕ್ಸ್ ನೀರು ಬಿಡಲು ಮನವಿ
ಮೂಡಲಗಿ: ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ತಕ್ಷಣವೇ ಘಟಪ್ರಭಾ ಎಡದಂಡೆ, ಘಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಗುರುವಾರ ಸಂಜೆ ಪ್ರತಿಕಾ ಹೇಳಿಕೆಯನ್ನು ನೀಡಿರುವ ಅವರು, ಈಗಾಗಲೇ ಹಿಡಕಲ್ ಜಲಾಶಯದಲ್ಲಿ ಗುರುವಾರದ ಮಾಹಿತಿಯಂತೆ 12 ಟಿಎಮ್‌ಸಿ ನೀರು ಸಂಗ್ರಹವಿದ್ದು, ಮೂರೂ ಕಾಲುವೆಗಳಿಗೆ 10 ದಿನಗಳವರೆಗೆ ಒಟ್ಟು 5 ಟಿಎಮ್‌ಸಿ ನೀರು ಬಿಟ್ಟರೆ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.ಘಟಪ್ರಭಾ ಎಡದಂಡೆ ಕಾಲುವೆಗೆ ದಿನಪ್ರತಿ 2400 ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್ಸ್ ಮತ್ತು ಸಿಬಿಸಿ ಕಾಲುವೆಗೆ 500 ಕ್ಯೂಸೆಕ್ಸ್ ನೀರನ್ನು ಹರಿಸುವಂತೆ ಮನವಿ ಮಾಡಿಕೊಂಡಿರುವ ಅವರು, 10 ದಿನಗಳವರೆಗೆ ನೀರನ್ನು ಹಿಡಕಲ್ ಜಲಾಶಯದಿಂದ ಬಿಡುಗಡೆ ಮಾಡಿದರೆ ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಈ ಜಲಾಶಯದಿಂದ ನೀರನ್ನು ಹರಿಸಬೇಕು. ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಬೇಸಿಗೆಯ ಸಂದರ್ಭದಲ್ಲಿ ಕುಡಿಯಲಿಕ್ಕೆ ನೀರು ಅಗತ್ಯವಾಗಿದೆ. ಸಾರ್ವಜನಿಕರ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ತಕ್ಷಣವೇ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವಂತೆ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಜಮಖಂಡಿ, ಬೀಳಗಿ ತಾಲೂಕುಗಳ ಸಾರ್ವಜನಿಕರಿಗೆ ಈ ನೀರು ಸದ್ಭಳಕೆಯಾಗಲಿದೆ. ಜೊತೆಗೆ ಜಾನುವಾರುಗಳಿಗೂ ಸಹ ಅನುಕೂಲವಾಗಲಿದೆ. ಪ್ರಸಕ್ತ ಬೇಸಿಗೆಯಲ್ಲಿ ಸಂಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆಯೂ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮತ್ತು ನೀರಾವರಿ ಇಲಾಖೆಯ ಮುಖ್ಯ ಇಂಜೀನಿಯರ್ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ.