ಗೋಕಾಕ : ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಒತ್ತಡ ಇತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮುಂದೆವರಿಸುತ್ತಿತ್ತು. ಈಗ ಅವರು ರಾಜೀನಾಮೆ ನೀಡಿರುವುದು ಒಳ್ಳೆಯದು, ಮೊದಲೇ ರಾಜೀನಾಮೆ ನೀಡಬೇಕಾಗಿತ್ತು. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ರಾಜೇನಾಮೆ ನೀಡು ಎಂದು ಹೇಳಬೇಕಿತ್ತು ಎಂದರು.
ಬಿಜೆಪಿಯ ಪ್ರಭಾವಿ ನಾಯಕರು ಅವರನ್ನು ರಾಜೀನಾಮೆ ನೀಡದಂತೆ ತಡೆ ಮಾಡಿದ್ದರು. ಅದು ಕೊನೆಗೂ ಯಶಸ್ವಿಯಾಗಲಿಲ್ಲ. ಸರ್ಕಾರ ಸರಿಯಾದ ತನಿಖೆ ನಡೆಸಬೇಕು. ಸಂತೋಷ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು ಎಂದ ಅವರು, ಕೆ.ಎಸ್.ಈಶ್ವರಪ್ಪ ಹಾಗೂ ತಮ್ಮ ವಿರುದ್ಧ ಒಂದೇ ಟೀಮ್ ಷಡ್ಯಂತ್ರ ಎಂಬ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಅವರನ್ನೇ ನೀವು ಕೇಳಬೇಕು. ಅವರನ್ನು ಕೇಳಿದರೆ ನಿಮಗೆ ಸರಿಯಾದ ಉತ್ತರ ಸಿಗಬಹುದು ಎಂದು ಹೇಳಿದರು.