ಗುಜರಾತ್ ಗಾಂಧೀ ನಗರದಲ್ಲಿ ಭಾನುವಾರದಂದು ನಡೆದ ಎನ್ ಸಿ ಡಿ ಎಫ್ ಐ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ದಲ್ಲಿ ಕೆಎಂಎಫ್ ಗೆ ಪ್ರಶಸ್ತಿ ನೀಡಿ ಗೌರವಿಸಿದ ಸಚಿವ ಅಮೀತ್ ಷಾ.*
ಬೆಂಗಳೂರು- ದೇಶದ ಪ್ರತಿಷ್ಠಿತ ಸಹಕಾರಿ
ಸಂಸ್ಥೆಯಾಗಿರುವ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲ ( ಎನ್ ಸಿ ಡಿ ಎಫ್ ಐ) ವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸು-ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ‘ಕೆಎಂಎಫ್’ ಗೆ ಪ್ರಶಸ್ತಿಯ ಭಾಗ್ಯ ಒಲಿದು ಬಂದಿದೆ.
ಭಾನುವಾರದಂದು ಗುಜರಾತ್ ರಾಜ್ಯದ ಗಾಂಧೀ ನಗರದಲ್ಲಿ ಎನ್ ಸಿ ಡಿ ಎಫ್ ಐ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮೀತ್ ಷಾ ಅವರು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮೀತ್ ಷಾ ಅವರು, ದೇಶದಲ್ಲಿಗ ಅಮೂಲ್ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕರ್ನಾಟಕದ ಕೆಎಂಎಫ್ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಕರ್ನಾಟಕವಲ್ಲದೇ ನೆರೆಯ ಬಹುತೇಕ ರಾಜ್ಯಗಳಲ್ಲಿಯೂ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ
ಉತ್ಪಾದನೆಗಳನ್ನು ರೈತ ಸಮುದಾಯಕ್ಕೆ ನೀಡುತ್ತಿದೆ. ಈ ಮೂಲಕ ಹೈನು ಉದ್ಯಮ ಬೆಳೆಯಲು ಈ ಸಂಸ್ಥೆಯು ಹೆಚ್ಚು ಸಹಕಾರಿಯಾಗಿದೆ. ತಮಿಳುನಾಡಿನಲ್ಲಿ ಸಹ ಸಹಕಾರಿ ಸಂಘಗಳು ಬೆಳೆಯಬೇಕಾಗಿದೆ. ದೇಶದಾದ್ಯಂತ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಹಿಳೆಯರು ಸಹ ಈ ನಿಟ್ಟಿನಲ್ಲಿ ಮುಂದೆ ಬಂದು ಹೈನುಗಾರಿಕೆಗೆ ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ. ಇದರಿಂದ ಹೈನುಗಾರಿಕೆ ಬೆಳೆಯಲು ಸಾಧ್ಯವಾಗುತ್ತದೆ. ಜತೆಗೆ ಆರ್ಥಿಕ ವಾಗಿ ಬಲಾಢ್ಯರಾಗಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ದೇಶದಲ್ಲಿರುವ ಎಲ್ಲ ಸಹಕಾರಿ ಸಂಸ್ಥೆಗಳು ತಮ್ಮ ದೈನಂದಿನ ದುಂದುವೆಚ್ಚಗಳಿಗೆ ಇತಿಶ್ರೀ ಹಾಡಬೇಕಿದೆ. ಹೈನುಗಾರಿಕೆ ಉದ್ಯಮ ಬೆಳೆಯಲು ರೈತರ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಇದೇ ವರ್ಷ ೪೦ನೇ ಅಂತರ್ ರಾಷ್ಟ್ರೀಯ ಹೈನುಗಾರಿಕೆ ಸಮ್ಮೇಳನವನ್ನು ಉದ್ದೇಶಿಸಲು ನಿರ್ಧರಿಸಲಾಗಿದೆ ಎಂದು ಅಮೀತ್ ಷಾ ತಿಳಿಸಿದರು.
ಎನ್ ಸಿ ಡಿ ಎಫ್ ಐ ಕಳೆದ ಐದು ವರ್ಷದ ಅವಧಿಯಲ್ಲಿ ಸುಮಾರು ಐದು ಸಾವಿರ ಕೋ.ರೂ ಅಧಿಕ ವ್ಯವಹಾರಗಳನ್ನು ನಡೆಸಿದ್ದು, ಇದರಲ್ಲಿ ಕರ್ನಾಟಕದ ಕೆಎಂಎಫ್ ಈ ಸಂಸ್ಥೆಗೆ ಸುಮಾರು ೨೪೦೦ ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿದ್ದರಿಂದ ಕೆಎಂಎಫ್ ನಂದಿನಿ ಬ್ರಾಂಡ್ ಗೆ ಪ್ರಶಸ್ತಿ ನೀಡಿ ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಳವು ಗೌರವಿಸಿದೆ.
ದೇಶದ ವಿವಿಧ ರಾಜ್ಯಗಳ ಸಹಕಾರಿಗಳು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.