ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ ‘ಬಿ’ ರಿಪೋರ್ಟ್ ಸಲ್ಲಿಸಿದೆ.
ಯುವತಿ ಕೊಟ್ಟ ದೂರಿನಲ್ಲಿ ಯಾವುದೇ ಹುರುಳಿಲ್ಲ, ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಲಾಗಿದೆ. ಇದರಿಂದ ಅತ್ಯಾಚಾರ ಪ್ರಕರಣದಲ್ಲಿ ಜಾರಕಿಹೊಳಿ ಬಚಾವಾಗಿದ್ದಾರೆ.ನಿನ್ನೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನಲೆ ಎಸ್‌ಐಟಿ ಯಿಂದ ತನಿಖಾವರದಿ ಸಲ್ಲಿಕೆಯಾಗಿದೆ. ಯುವತಿ ನೀಡಿದ್ದ ದೂರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖಾಧಿಕಾರಿ ಎಸಿಪಿ ಕವಿತಾ ಅವರಿಂದ ತನಿಖೆ ನಡೆದಿತ್ತು. ಇದರ ನೇತೃತ್ವವನ್ನು ಐಜಿಪಿ ಸೌಮೆಂದು ಮುಖರ್ಜಿ ವಹಿಸಿದ್ದರು. ಎಸ್‌ಐಟಿ ಒಟ್ಟು 150 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹಲವು ವಿಚಾರಗಳನ್ನು ತಿಳಿಸಿದೆ. ಕಳೆದ ವರ್ಷ ಸಿಡಿ ಬಹಿರಂಗಗೊಂಡ ಹಿನ್ನೆಲೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ವಿಡಿಯೋ ಬಿಡುಗಡೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಪುಟ ವಿಸ್ತರಣೆಯ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆದಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಕ್ಯಾಬಿನೆಟ್ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವ ವರದಿ ಹಿಡಿದು ರಮೇಶ್ ಜಾರಕಿಹೊಳಿ ಸಂಪುಟ ಸೇರಿಕೊಳ್ಳಬಹುದು.