ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಸತತವಾಗಿ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯು ನಮ್ಮ ಪ್ರಸ್ತಾವಣೆಯನ್ನು ವಿಳಂಬ ಮಾಡಿತ್ತು.
ಆದರೂ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೂಡಲಗಿಯಲ್ಲಿ ಪ್ರಸ್ತಾವಣೆ ಹಂತದಲ್ಲಿರುವ ಉಪನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಮಂಜೂರಾತಿ ನೀಡುವಂತೆ ಕೋರಲಾಗಿತ್ತು. ನಮ್ಮ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಹಣಕಾಸು ಇಲಾಖೆಯಿಂದ ಅನುಮೋದನೆ ನೀಡಿ, ಕಛೇರಿ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ. ಹಣಕಾಸು ಇಲಾಖೆಯಿಂದ ಕಂದಾಯ ಇಲಾಖೆಗೆ ಪ್ರಸ್ತಾವಣೆಯು ನಿನ್ನೆ ಸೋಮವಾರದಂದು ಸಲ್ಲಿಕೆಯಾಗಿದೆ ಎಂದು ಹೇಳಿದರು.
ಹೊಸದಾಗಿ ಮೂಡಲಗಿಯಲ್ಲಿ ಆರಂಭವಾಗಲಿರುವ ಈ ಕಛೇರಿಯಲ್ಲಿ ತಾಲೂಕಿನ ಎಲ್ಲ 48 ಗ್ರಾಮಗಳು ಸೇರ್ಪಡೆಯಾಗಲಿವೆ. ಬರುವ ಫೆಬ್ರುವರಿ ತಿಂಗಳಲ್ಲಿ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸಲಾಗುವುದು.
ಮೂಡಲಗಿ ತಹಶೀಲ್ದಾರ ಕಛೇರಿ ಹತ್ತಿರ ಉಪನೋಂದಣಾಧಿಕಾರಿಗಳ ಕಛೇರಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಈ ಕಛೇರಿಗೆ ಹೊಸದಾಗಿ ಉಪನೋಂದಣಾಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಮತ್ತು ಗ್ರುಫ್-ಡಿ ಹುದ್ದೆಗಳು ಈ ಕಛೇರಿಗೆ ಸೃಷ್ಟಿಸಲಾಗಿದೆ. ಈ ಮೂಲಕ ಮೂಡಲಗಿ ತಾಲೂಕಿನ ನಾಗರೀಕರ ಬಹುದಿನಗಳ ಕನಸು ಈಡೇರಿದಂತಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.