ಮೂಡಲಗಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದರೆ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಕೆ.ಎಂ.ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರದಂದು ಪಟ್ಟಣದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೆ.ಎಂ.ಎಫ್ ದಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 8.50 ಲಕ್ಷ ರೂ ಮೊತ್ತದ ಚೆಕ್ಕಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತರ ಆರ್ಥಿಕಾಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ರೈತ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಅವುಗಳ ಸೌಲಭ್ಯಗಳನ್ನು ಪಡೆಯುವ ಮೂಲಕ ರೈತರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಉತ್ತಮ ಸಾಧನೆಗಳನ್ನು ಮಾಡಬೇಕು. ನಮ್ಮ ದೇಶ ಕೃಷಿ ಪ್ರಧಾನವಾದುದ್ದರಿಂದ ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಹೇಳಿದರು.
ಕೆ.ಎಂ.ಎಫ್ ದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಜೊತೆಗೆ 50 ಸಾವಿರ ರೂ ಮೊತ್ತದ ರಾಸುಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತಿದೆ. ರೈತರ ಆರ್ಥಿಕಾಅಭಿವೃದ್ಧಿಗೆ ಮತ್ತು ಸ್ವಾಲಂಬಿ ಬದುಕು ಕಲ್ಪಿಸಿಕೊಡಲು ಕೆ.ಎಂ.ಎಫ್ ಬದ್ಧವಿದ್ದು, ಈ ದಿಸೆಯಲ್ಲಿ ರೈತರ ಸೇವೆಯನ್ನು ನಮ್ಮ ಸಂಸ್ಥೆಯು ಮಾಡುತ್ತಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂಧರ್ಭದಲ್ಲಿ ಮುನ್ಯಾಳ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 2.50 ಲಕ್ಷ ರೂ, ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕಾಗಿ 1.70 ಲಕ್ಷ ರೂ ಗಳ ಅನುದಾನವನ್ನು ಕೆ.ಎಂ.ಎಫ್ ದಿಂದ ವಿತರಿಸಿದರು. ಜಿಲ್ಲಾ ಹಾಲು ಒಕ್ಕೂಟದಿಂದ ಆರು ಜನ ಫಲಾನುಭವಿಗಳಿಗೆ ರಾಸು ವಿಮೆಯ ತಲಾ 50 ಸಾವಿರ ರೂ ಗಳಂತೆ ಮೂರು ಲಕ್ಷ ರೂ ಮೊತ್ತದ ಚೆಕ್ಕಗಳನ್ನು ವಿತರಿಸಿದರು. ಜಿಲ್ಲಾ ಹಾಲು ಒಕ್ಕೂಟದ ಅಡಿಯಲ್ಲಿ ಕಲ್ಯಾಣ ಸಂಘದಿಂದ 13 ಫಲಾನುಭವಿಗಳಿಗೆ ತಲಾ ಹತ್ತು ಸಾವಿರಗಳಂತೆ 1.30 ಲಕ್ಷ ರೂಗಳ ಚೆಕ್ಕಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಮೂಡಲಗಿ ಉಪಕೇಂದ್ರ ಅಧಿಕಾರಿ ರವಿ ತಳವಾರ, ವಿಸ್ತರಣಾಧಿಕಾರಿ ವಿಠ್ಠಲ ಲೋಕುರಿ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ನಿರ್ದೇಶಕರು, ಹಲವು ಗಣ್ಯರು ಉಪಸ್ಥಿತರಿದರು.