ಸವದತ್ತಿ : ಈಗಾಗಲೇ ಬಿಜೆಪಿ ಸರ್ಕಾರದ ಸ್ಪೀಡ್ ಅನ್ನ ಕಡಿಮೆ ಮಾಡಿದ್ದೇವೆ. ಇನ್ನೂ 18 ತಿಂಗಳ ಅವಧಿಯಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡಲಿದ್ದೇವೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.
ಮುನವಳ್ಳಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಆನಂದ ಮಾಮನಿ ಅವರು ಸತತ ಮೂರು ಬಾರಿ ಶಾಸಕರಾಗಿದ್ದಾರೆ. ಮುನವಳ್ಳಿ ಸಾಕಷ್ಟು ಅಭಿವೃದ್ಧಿ ಹೊಂದಬೇಕಾಗಿತ್ತು. ಆದರೆ ಶಾಸಕರೂ ಅಭಿವೃದ್ಧಿಗೆ ಆಸಕ್ತಿ ತೋರಿಲ್ಲ ಅನಿಸುತ್ತೇ ಎಂದು ಕಾಲೆಳೆದರು.
ಸವದತ್ತಿ ಶಾಸಕರು ಮತ್ತು ಬಿಜೆಪಿ ಸರ್ಕಾರ 120 ಸ್ಪೀಡ್ ನಲ್ಲಿ ಇದೆ. ಹೀಗಾಗಿ ಕೋವಿಡ್, ಪ್ರವಾಹ ಏನು ಕಾಣುತ್ತಿಲ್ಲ. ಈಗಾಗಲೇ ಗಾಡಿ ಸ್ಪೀಡ್ ಅನ್ನು 60ಕ್ಕೆ ತಂದಿದ್ದೇವೆ. ಇನ್ನೂ 18 ತಿಂಗಳ ಆಡಳಿತದಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡುತ್ತೇವೆ. ಆ ಲೆಕ್ಕಾಚಾರದಲ್ಲಿ ನಾವಿದ್ದೇವೆ ಎಂದು ಬಿಜೆಪಿ ಸರ್ಕಾರಕ್ಕೆ ಲೇವಡಿ ಮಾಡಿದರು.
ಮುನವಳ್ಳಿ ಪುರಸಭೆಯಿಂದ 23 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎಲ್ಲ ಸಮುದಾಯದವರನ್ನು ಒಂದೇ ದೃಷ್ಟಿಯಲ್ಲಿ ನೋಡುವ ಪಕ್ಷ ಅಂದ್ರೆ ಅದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕು. ಸವದತ್ತಿ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ಶತಸಿದ್ಧ ಎಂದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಸೋತಿರಬಹುದು. ಆದರೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಇದೆ. ತಮ್ಮ ಪಕ್ಷ ದೂರ ದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸುತ್ತದೆ.ಆದರೆ ಬಿಜೆಪಿಗೆ ಯಾವುದೇ ದೂರ ದೃಷ್ಟಿ ಇಲ್ಲ. ಕಾಂಗ್ರೆಸ್ 1947 ರಿಂದ ಇಲ್ಲಿಯವೆಗೆ ತನ್ನದೆಯಾದ ಕೊಡುಗೆ ನೀಡಿದೆ. ಬಿಜೆಪಿ ಸರ್ಕಾರದ ಕೊಡುಗೆ ಏನು ? ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಸರ್ಕಾರ ಬಂದ ಮೇಲೆ ಒಂದೆಯೊಂದು ಆಸ್ಪತ್ರೆ, ವಿಶ್ವವಿದ್ಯಾಲಯವನ್ನು ನಿರ್ಮಾಣ ಮಾಡಿಲ್ಲ. ಅದೇ ಕಾಂಗ್ರೆಸ್ ಸರ್ಕಾರದಲ್ಲಿ ದೇಶದ ಪ್ರತಿ ರಾಜ್ಯದಲ್ಲಿ ಸ್ಪೇಷಲಿಸ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ನಾವು ಕೆಲಸ ಮಾಡಿ ಮತ ಕೇಳುತ್ತಿದ್ದೇವೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಂತರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಬಡವರು ಹಸಿವಿನಿಂದ ಸಾಯುವಂತ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ಅನ್ನಭಾಗ್ಯ ಯೋಜನೆ ಬಡವರ ಹಸಿವು ನೀಗಿಸಿತು ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಐದು ರೂಪಾಯಿ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಚಕ್ಕಡಿ ಓಡಿಸಿ, ಬೊಬ್ಬೆ ಹೊಡೆದಿದ್ದರು. ಆದರೆ ಈಗ ನೂರರ ಗಡಿ ದಾಟಿದೆ. ಅಚ್ಚೇ ದಿನ್ ಆಯೇಗಾ, ಅಂತಾ ಹೇಳಿ ಅಧಿಕಾರ ತೆಗೆದುಕೊಂಡರು, ಈಗ ನಾವು ಅಚ್ಚೇ ದಿನ್ ಬೇಡಾ, ಹಳೆ ದಿನಗಳನ್ನೇ ಮರಳಿ ನೀಡಿ ಎನ್ನುವಂತಾಗಿದೆ ಎಂದು ಮಾತಿನಲ್ಲಿಯೇ ತಿವಿದರು.
ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಕಿ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಮುಖಂಡರು ಮುನವಳ್ಳಿ ಪುರಸಭೆಯ 23 ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ವಿ.ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ವಿಶ್ವಾಸ್ ವೈದ್ಯ, ರವೀಂದ್ರ ಯಲಿಗಾರ, ಪಂಚನಗೌಡ್ರ ದ್ಯಾಮನಗೌಡ್ರ, ಉಮೇಶ್ ಬಾಳಿ, ಪಂಚಪ್ಪ ಮಲ್ಲಾಡ, ಪಕ್ಕೀರಪ್ಪ , ಸೌರಭ್ ಸೇರಿದಂತೆ ಇತರರು ಇದ್ದರು.