Breaking News

ಅಧಿಕಾರಕ್ಕೇ ಬಂದು 24 ಗಂಟೆಯಲ್ಲೇ ಮೀಸಲಾತಿ ನೀಡುತ್ತೇವೆಂದವರು ಇನ್ನೂ ಮೀಸಲಾತಿ ನೀಡಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ


ಯಲಬುರ್ಗಾ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಕೆಲವರು ಚುನಾವಣಾಪೂರ್ವದಲ್ಲಿಯೇ ಹೇಳಿದ್ದರು. ಆದರೆ, ಅಧಿಕಾರಕ್ಕೇರಿ 24 ತಿಂಗಳು ಕಳೆದರು ಕೂಡ ಇನ್ನೂ ಮೀಸಲಾತಿ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಮೀಪದ ವಜ್ಜರಬಂಡಿ ಗ್ರಾಮದಲ್ಲಿ ವಾಲ್ಮೀಕಿ-ನಾಯಕ ಮಹಾಸಭಾದ ವತಿಯಿಂದ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ತುಲಾಭಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಮೀಸಲಾತಿ ಹೆಚ್ಚಿಸುವಂತೆ ಬೇಡಿಕೆ ಇಟ್ಟಾಗ ಚುನಾವಣೆಯ ನಂತರ ಮೀಸಲಾತಿ ನೀಡುವುದಾಗಿ ಸರ್ಕಾರದವರು ಹೇಳಿದ್ದರು. ಆಬಳಿಕ ರಾಜನಹಳ್ಳಿ ಹಾಗೂ ರಾಯಚೂರಿನಲ್ಲಿಯೂ ಕೂಡ ಸಮುದಾಯದ ಶಾಸಕರೇ ಮೀಸಲಾತಿ ಕೊಡಿಸುವುದಾಗಿ ಸ್ವಾಮೀಜಿಯವರಿಗೆ ಮಾತು ನೀಡಿದ್ದರು. ನಂತರ ಆ ಶಾಸಕರು ಮಂತ್ರಿಗಳಾಗಿ ಓಡಾಡುತ್ತಿದ್ದಾರೆಯೇ ಹೊರತು ಮೀಸಲಾತಿ ಕೊಡಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮತದಾನ ಹಕ್ಕನ್ನು ಸೂಕ್ತವಾಗಿ ಬಳಸಿಕೊಳ್ಳಿ:

ಸರ್ಕಾರದವರು ಮೀಸಲಾತಿ ಹೆಚ್ಚಿಸಲು ಹಿಂದೇಟು ಹಾಕುತ್ತಿರುವುದರಲ್ಲಿ ಸಮುದಾಯದ ಜನರ ತಪ್ಪು ಕೂಡ ಇದೆ. ಯಾಕೆಂದರೇ ನೀವು ಆಶ್ವಾಸನೆಗಳಿಗೆ ಮರುಳಾಗುತ್ತೀರಿ. ಆಶ್ವಾಸನೆಗಳನ್ನು ಈಡೇರಿಸದಿದ್ದರೇ ಜನಪ್ರತಿನಿಧಿಗಳನ್ನು ಪ್ರಶ್ನಿಸುವುದಿಲ್ಲ. ಜನರು ಸರ್ಕಾರವನ್ನು ಪ್ರಶ್ನೆ ಮಾಡಬೇಕು. ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರು ನೀಡಿರುವ ಶ್ರೇಷ್ಠ ಅಧಿಕಾರ ಮತದಾನವಾಗಿದೆ. ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ನಿಮ್ಮ ಏಳಿಗೆಗಾಗಿ ಶ್ರಮಿಸುವ ನಾಯಕರಿಗೆ ನೀವು ಮತ ನೀಡಬೇಕು. 5 ವರ್ಷಕ್ಕೊಮ್ಮೆ ಬರುವ ಅಧಿಕಾರವನ್ನು ಸೂಕ್ತವಾಗಿ ಬಳಸಿಕೊಂಡಾಗ ಮಾತ್ರ ಜನರ ಬೇಡಿಕೆಗಳು ಈಡೇರಲು ಸಾಧ್ಯ ಎಂದು

ಎಸ್ಟಿ ಸಮುದಾಯಕ್ಕೆ 7.5 ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಸಮುದಾಯದ ಜನರು ಹಾಗೂ ನಾಯಕರು ಕೂಡ ಎಚ್ಚೆತ್ತುಕೊಳ್ಳಬೇಕು. ಅಂದಾಗ ನಾವು ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ:

ಸಂವಿಧಾನ ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರ ಇದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಇದು ಎಲ್ಲ ವರ್ಗದವರಿಗೂ ಇರುವುದಾಗಿದೆ. ಅದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಸಂವಿಧಾನ ಇಲ್ಲದಿದ್ದರೇ ನಾವು ಮತ್ತೆ ಹಳೆ ಕಾಲದವರಂತೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮುದಾಯದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದ ಉದ್ಯೋಗ ಹೆಚ್ಚು ಸಿಗಬಹುದು. 10 ರಿಂದ 20 ಸಾವಿರ ಕುಟುಂಬಗಳಿಗೆ ಅನುಕೂಲವಾಗಬಹುದು. ಆದರೆ, ಇನ್ನುಳಿದ ಸಾವಿರಾರು ಕುಟುಂಬಗಳಿಗೆ ಪರಿಹಾರವೇನು? ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳಿಗೆ ಶಿಕ್ಷಣ ಕೊಡಿಸಿ:

ಸಮುದಾಯದ ಬಹುತೇಕ ಜನರು ಮನೆ, ಹಬ್ಬ, ಹರಿದಿನಗಳ ಖರ್ಚಿಗಾಗಿ ಸಾಲದಲ್ಲೇ ಬದುಕುತ್ತಿರುವುದರಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕನಿಷ್ಟ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ದೇವಾನುದೇವತೆಗಳನ್ನು ಹೊತ್ತು ಮೆರೆಸುವುದನ್ನು ಬಿಟ್ಟು ಮಹಾನ್ ನಾಯಕರು ಅಥವಾ ನಿಮ್ಮ ಸಮುದಾಯದ ಮಹಾನ ವ್ಯಕ್ತಿಗಳನ್ನು ಹೊತ್ತು ಮೆರೆಸಿ. ವಾಲ್ಮೀಕಿ ಸೇರಿದಂತೆ ಸಮುದಾಯದ ಮಹಾನ ಪುರುಷರ ಹೆಸರಿನಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆಯಿರಿ. ನಿಮ್ಮ ಸಮಾಜ ಹಾಗೂ ನಿಮಗೋಸ್ಕರ ಹೋರಾಟ ಮಾಡಿದವರ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದರು.

ಬುದ್ದ, ಬಸವಣ್ಣ, ಅಂಬೇಡ್ಕರ್, ಶಾಹು ಮಹಾರಾಜ್ ಸೇರಿ ಅನೇಕ ಮಹನೀಯರು ಸಮಾಜಕ್ಕಾಗಿ ಬದುಕಿದರು. ಪ್ರತಿಯೊಬ್ಬರಿಗೂ ಸಮಾನತೆ ಕೊಡಿಸಲು ಹೋರಾಡಿದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಅದ್ಧೂರಿ ಸ್ವಾಗತ:

ಕಾರ್ಯಕ್ರಮಕ್ಕಾಗಿ ಗೋಕಾಕದಿಂದ ಯಲಬುರ್ಗಾಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಮಾನವ ಬಂಧುತ್ವ ವೇದಿಕೆಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಭೀಮಪ್ಪ ಹಾವಳಿ ನೇತೃತ್ವದಲ್ಲಿ ನೂರಾರು ಸದಸ್ಯರು ಅದ್ಧೂರಿಯಾಗಿ ಸ್ವಾಗತಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಾಸಕ ಅಮರೇಗೌಡ ಬಯ್ಯಾಪುರ, ರತ್ನಾಕರ ತಳವಾರ, ರಾಮಣ್ಣ ಕಲ್ಲನ್ನವರ್, ಯಲ್ಲಪ್ಪ, ನಾರಾಯಣಪ್ಪ, ರಾಜು, ಪಕೀರಪ್ಪ ತಳವಾರ ಸೇರಿ ಸಾವಿರಾರು ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ