ಯಮಕನಮರಡಿ: ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಸೇರಿ ಇನ್ನಿತರ ಮಹಾನ್ ವ್ಯಕ್ತಿಗಳ ಕಿರುಹೊತ್ತಿಗೆಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಹೇಳಿದರು.
ಮತಕ್ಷೇತ್ರದ ಇಸ್ಲಾಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಮೂರು ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ, ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಮಕ್ಕಳು ಹಾಗೂ ಯುವಕರಿಗೆ ಮಹಾನ್ ವ್ಯಕ್ತಿಗಳ ಬದುಕು ಹಾಗೂ ಹೋರಾಟವನ್ನು ತಿಳಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಿರುಹೊತ್ತಿಗೆಗಳನ್ನು ಹೊರತರಬೇಕೆಂಬ ಆಶಯ ಬಹಳ ದಿನಗಳಿಂದ ಇದೆ. ಶೀಘ್ರವೇ ಕಿರುಹೊತ್ತಿಗೆಗಳನ್ನು ಹೊರತಂದು ಶಾಲಾ ಮಕ್ಕಳಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ದೂರ ಇದ್ದು, ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣ ಹಾಗೂ ಕ್ರೀಡೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮಾಲಾರ್ಪಣೆ ಮಾಡುವ ಬದಲು ನೋಟ್ ಬುಕ್ ವಿತರಣೆ:
ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ವಿವಿಧ ಮುಖಂಡರು ಮಾಲಾರ್ಪಣೆ ಮಾಡಿ ಸನ್ಮಾನಿಸುವ ಯೋಚನೆ ಮಾಡಿದ್ದರು. ಆದರೆ, ಇದನ್ನು ಸತೀಶ ಅವರು ನಿರಾಕರಿಸಿ, “ಅದರ ಬದಲು ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವಂತೆ” ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ವಿವಿಧ ಕಾಮಗಾರಿಗಳಿಗೆ ಚಾಲನೆ:
ಇದಕ್ಕೂ ಮುನ್ನ ಸತೀಶ ಜಾರಕಿಹೊಳಿಯವರು ಇಸ್ಲಾಂಪುರ ಗ್ರಾಮದಲ್ಲಿ ಎರಡು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಶಹಾಬಂದರ ಗ್ರಾಮದಲ್ಲಿ ಎರಡು ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಯಮಕನಮರಡಿ ಮತಕ್ಷೇತ್ರದ ವಿವಿಧ ಅಂಗನವಾಡಿಗಳಿಗೆ ನೂತನವಾಗಿ ಆಯ್ಕೆಯಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಿದರು.
ನಂತರ ಇಸ್ಲಾಂಪುರ ಹಾಗೂ ಶಹಾಬಂದರ ಗ್ರಾಮಗಳ ಮಧ್ಯೆ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಜಿಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.