ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪುರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಮನೆಗಳಿಗೆ ಹಾನಿಯಾಗಿತ್ತು. ವಿಷಯ ತಿಳಿದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಗ್ರಾಮಕ್ಕೆ ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶಾರ್ಟ್ ಸರ್ಕ್ಯೂಟ್ ನಿಂದ ಗ್ರಾಮದ ಕಲ್ಲಪ್ಪ ಮಡಿವಾಳರ ಹಾಗೂ ಸುರೇಶ ಮಡಿವಾಳರ ಎಂಬುವರ ಮನೆಗೆ ಹಾನಿಯಾಗಿತ್ತು. ಮನೆಯಲ್ಲಿನ ವಸ್ತುಗಳು ಕೂಡ ಹಾನಿಗೀಡಾಗಿದ್ದವು. ಎರಡೂ ಮನೆಗಳು ಅಕ್ಕಪಕ್ಕದಲ್ಲೇ ಇದ್ದು, ಈ ಇಬ್ಬರು ಸಹೋದರರಾಗಿದ್ದಾರೆ.
ಸತೀಶ ಜಾರಕಿಹೊಳಿ ಅವರು ಮಡಿವಾಳರ ಕುಟುಂಬಸ್ಥರಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಹಾನಿಗೀಡಾಗಿರುವ ಮನೆಯೊಳಗೆ ತೆರಳಿ ಪರಿಶೀಲನೆ ಮಾಡಿದರು.
ಮನೆ ನಿರ್ಮಾಣದ ಭರವಸೆ:
ನಂತರ ಸತೀಶ ಜಾರಕಿಹೊಳಿಯವರು ಕುಟುಂಬಸ್ಥರೊಂದಿಗೆ ಮಾತನಾಡಿ, ಗ್ರಾಮ ಪಂಚಾಯತ್ ನಿಂದ ಮನೆ ನಿರ್ಮಿಸಿಕೊಡುವಂತೆ ಸೂಚಿಸುತ್ತೇನೆ. ಕಲ್ಲಪ್ಪ ಮಡಿವಾಳರ ಕುಟುಂಬಕ್ಕೆ 30 ಸಾವಿರ ಹಾಗೂ ಸುರೇಶ ಮಡಿವಾಳರ ಕುಟುಂಬಕ್ಕೆ 20 ಸಾವಿರ ರೂ. ಪರಿಹಾರ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.