ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಎಲ್ಲ ಶಿಕ್ಷಕರು, ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಡಿಡಿಪಿಐ ಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಎಲ್ಲರಿಗೂ ವಿಶೇಷ ಸಂದೇಶ ಒಳಗೊಂಡಿರುವ ಶುಭಾಶಯ ಪತ್ರಗಳನ್ನು ವಿತರಿಸಿದ್ದಾರೆ.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸತೀಶ ಅವರು ಎಲ್ಲ ತಾಲೂಕಿನ ಶಿಕ್ಷಕರಿಗೂ ಸಂದೇಶ ಒಳಗೊಂಡಿರುವ ಶುಭಾಶಯ ಪತ್ರಗಳನ್ನು ವಿತರಿಸಿದರು.
ಶಿಕ್ಷಕರಿಗೆ ಸತೀಶ ಜಾರಕಿಹೊಳಿಯವರ ಸಂದೇಶ ಇಂತಿದೆ:
ಆತ್ಮೀಯ ಶಿಕ್ಷಕ ಬಂಧುಗಳೇ ,
ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಕರ ಮಾತು ಮಂತ್ರಗಳಂತೆ ಕೆಲಸ ಮಾಡುತ್ತವೆ ಎಂದು ನಾವು ಈ ಹೊತ್ತಿಗೂ ನಂಬಿರುವುದು ಸಮಾಜಕ್ಕೆ ಗುರುವಿನ ಸ್ಥಾನದ ಮಹತ್ವ ತಿಳಿಸುತ್ತದೆ. ಈ ಸ್ಮರಣೆಗೋಸ್ಕರ ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮ ಆಚರಿಸುತ್ತಿರುವುದು ಸಮಸ್ತ ಗುರು ಬಳಗಕ್ಕೆ ಸಲ್ಲಿಸುವ ಗೌರವವಾಗಿದೆ.
ಗುರು ಎಂದರೆ ಜ್ಯೋತಿಯಂತವರು. ಒಂದು ಜ್ಯೋತಿಯಿಂದ ಎಷ್ಟೋ ಜ್ಯೋತಿಗಳನ್ನು ಬೆಳಗಿಸಬಹುದು. ಹಾಗೆ ಬೆಳಗಿನ ಜ್ಯೋತಿಗಳ ಈ ದಿನ ಪ್ರಪಂಚವನ್ನು ಬೆಳಗಿಸುತ್ತಿದೆ. ಅಂಬೇವಾಡೇಕರ ಎಂಬ ವಿದ್ಯಾರ್ಥಿ ತನ್ನ ಗುರುವಿನ ಮೇಲಿರುವ ಅಭಿಮಾನದಿಂದ ಗುರುವಿನ ಹೆಸರಾದ ಅಂಬೇಡ್ಕರ್ ಆಂತ ತನ್ನ ಹೆಸರಾಗಿ ಬದಲಾಯಿಸಿಕೊಂಡವರು ಅವರೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್. ಹೀಗೆ ಗುರುವಿನ ಆರಾಧನೆ ಈ ಹೊತ್ತಿಗೂ ನಿರಂತರವಾಗಿ ನಡೆಯುತ್ತಿರುವುದು ಗುರುವಿನ ಮಹತ್ವ ಸಾರುತ್ತದೆ.
“ಪ್ರಯತ್ನ ನಿಮ್ಮದು ಪ್ರೋತ್ಸಾಹ ನಮ್ಮದು” ಈ ಧ್ಯೇಯದ ಅಡಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿರುವ ಗುರುಬಳಗದ ಕಾರ್ಯ ಶ್ಲಾಘನೀಯವಾಗಿದೆ. ಬರುವಂತಹ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳನ್ನು ಹೊರತರುವಲ್ಲಿ ಗುರುವಿನ ಮಾರ್ಗದರ್ಶನ ಸದಾ ನಮ್ಮೆಲ್ಲರಿಗೂ ಇರಲಿ ಎಂದು ಆಶಿಸುತ್ತಾ ವೈಜ್ಞಾನಿಕ ಮನೋಭಾವನೆ ಹೊಂದಿರುವ ನಾಗರಿಕ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗುರುವಿನ ಪಾತ್ರ ಶ್ರೇಷ್ಠವಾಗಿದೆ. ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ.
ಮಕ್ಕಳು ಮನುಕುಲದ ಆಶಾ ಕುಸುಮಗಳು, ಮನೆ ಅಂಗಳದಿ ಬೆಳಗುವ ಮಂಗಲ ದೀಪಗಳು, ರಾಷ್ಟ್ರ ಭಾಗ್ಯೋದಯದ ಶಿಲ್ಪಿಗಳು, ದೇಶ ಬಯಸುವ ಉತ್ಕ್ರಷ್ಟ ಮಾನವ ಸಂಪನ್ಮೂಲ ನಿರ್ಮಾತೃಗಳ ಭಾಗಿದಾರರಾದ ಎಲ್ಲ ಶಿಕ್ಷಕ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು.
6 ರಿಂದ 10ನೇ ತರಗತಿಯವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿರುವ ಪ್ರಯುಕ್ತ , ಕೋವಿಡ್ -19 ರ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ತರಗತಿಗಳನ್ನು ಆರಂಭಿಸಿ ಯಶಸ್ವಿಗೊಳಿಸುವಲ್ಲಿ ತಮ್ಮ ಪಾತ್ರ ಹಿರಿದಾಗಿದೆ. ತಾವೆಲ್ಲ ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಣೆ ಮಾಡುತ್ತಾ ಆನ್ ಲೈನ್ ತರಗತಿಗಳನ್ನು ನಿರ್ವಹಿಸಿ ವೃತ್ತಿ ಶ್ರೇಷ್ಠತೆಯನ್ನು ಹೆಚ್ಚಿಸಿ ಸಮಾಜದ ಪ್ರೀತಿಗೆ ಪಾತ್ರರಾಗಿರುವ ಎಲ್ಲ ನಮ್ಮ ಸಮಸ್ತ ಗುರು ಬಳಗಕ್ಕೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ತಮ್ಮೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು……