ಬೆಳಗಾವಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಮೊನ್ನೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಸುದ್ದಿ ಇನ್ನೂ ತಣ್ಣಗಾಗಿಲ್ಲ. 2 ದಿನ ಕಳೆದರೂ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ. ಈ ನಡುವೆ ಮತ್ತೊಂದು ಸಾಮೂಹಿಕ ಅತ್ಯಾಚಾರ ಕೇಸ್ ದಾಖಲಾಗಿದ್ದು, ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ.ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 16 ವರ್ಷದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
15 ದಿನದ ಹಿಂದೆ ಬಾಲಕಿಯನ್ನು ಪರಿಚಯಸ್ಥ ಯುವಕನೊಬ್ಬ ಬೈಕ್ ನಲ್ಲಿ ಕರೆದೊಯ್ದು ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಲು ಬಾಲಕಿ ಕುಟುಂಬದವರು ಹಿಂದೇಟು ಹಾಕಿದ್ದರು. ಆದರೆ ಮೈಸೂರು ಗ್ಯಾಂಗ್ ರೇಪ್ ಘಟನೆಯಾದ ಬಳಿಕ ಬಾಲಕಿ ಪೋಷಕರು ದೂರು ನೀಡಿದ ನಂತರ ಘಟನೆ ಬಯಲಾಗಿದೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಐವರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಪತ್ತೆಗೆ ಬಲೆ ಬೀಸಿದ್ದಾರೆ. ಅತ್ತ ಮೈಸೂರು ಪ್ರಕರಣ ಸಂಬಂಧ ಯಾವೊಬ್ಬ ಆರೋಪಿಯೂ ಪೊಲೀಸರಿಗೆ ಸಿಕ್ಕಿಲ್ಲ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ರಾಜ್ಯದಲ್ಲಿ ಬಯಲಾಗಿದ್ದು, ಕಾನೂನು ಸುವ್ಯವಸ್ಥೆ ಎತ್ತ ಸಾಗಿದೆ? ಎಂದು ಜನತೆ ಆತಂಕಗೊಂಡಿದ್ದಾರೆ. ಕಾಮುಕರನ್ನು ಕೂಡಲೇ ಬಂಧಿಸಿ ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ.