ಗೋಕಾಕ : ಮನುಷ್ಯ ಜೀವನ ಹೇಗೆ ಬಂದಿದೆ ಹಾಗೆ ಹೋಗಬಾರದು, ಹುಟ್ಟು ಮತ್ತು ಸಾವಿನ ಮಧ್ಯದಲ್ಲಿರುವ ದಿನಗಳನ್ನು ನಾವು ಪರೋಪಕಾರಕ್ಕಾಗಿ ಕಳೆಯಬೇಕು ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು .
ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದ ವತಿಯಿಂದ ಉಪ ಕಾರ್ಯಾಗೃಹದಲ್ಲಿ ಶ್ರಾಶಣ ಮಾಸದ ನಿಮಿತ್ಯ ಹಮ್ಮಿಕೊಂಡ ವಿಚಾರಣಾಧೀನ ಖೈದಿಗಳ ಮನಪರಿವರ್ತನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿ ಅವರು ಮಾತನಾಡಿದರು.
ಸಾಕಷ್ಟು ಜನ ಪ್ರವಾದಿ ಹಾಗೂ ಸಂತರು ಬಂದು ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಿಕೊಳ್ಳಬೇಡಿ ಎಂದು ಜಗತ್ತಿಗೆ ಸಾರಿದ್ದಾರೆ ಆ ದಿಸೆಯಲ್ಲಿ ನಾವು ಇಂದು ಬಾಳಿ ಬದುಕಬೇಕಾಗಿದೆ. .
ಮನುಷ್ಯ ಯಾರಿಗೆ ಬೇಕಾದರು ಮೋಸ ಮಾಡಬಹುದು ಆದರೆ ನಮ್ಮ ಮನಸ್ಸಿಗೆ ಮೋಸ ಮಾಡಲಾರ ಮನಸ್ಸಿನ ಭಾವನೆಯನ್ನು ಅರಿತು ನಾವು ಸುಂದರ ಬದುಕನ್ನ ಕಟ್ಟಿಕೋಳ್ಳಬೇಕಾಗಿದೆ. ಪರೋಪಕಾರಿ ಜೀವನವನ್ನು ನಡೆಸಿ ಇತರರಿಗೆ ಮಾದರಿಯಾಗಬೇಕಾಗಿದೆ. ಮನುಷ್ಯನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಪರರ ಒಳಿತಿಗಾಗಿ ಬಾಳುವುದೆ ಮಾನವ ಜೀವನ.
ಜೀವನದಲ್ಲಿ ಸಣ್ಣಪುಟ್ಟ ಅಪರಾಧಗಳನ್ನು ಮಾಡಿ ಕೆಟ್ಟ ಗಳಿಗೆಯಲ್ಲಿ ನೀವು ಬಂಧಿಯಾಗಿದ್ದಿರಿ, ಅದನ್ನು ಮರೆತು ಮತ್ತೆ ಒಳ್ಳೆಯ ಆಲೋಚನೆಗಳನ್ನು ಮಾಡಿ ಸಮಾಜವನ್ನು ಕಟ್ಟುವ ಕಾರ್ಯವಾಗಬೇಕು.ತಪ್ಪು ಮಾಡುವುದು ಸ್ವಾಭಾವಿಕ ಆದನ್ನು ಅರಿತು ಮನಪರಿವರ್ತನ ಮಾಡಿಕೊಂಡು ಒಳ್ಳೆಯ ಜೀವನ ನಡೆಸುವದೆ ಮಾನವ ಜನ್ಮ. ಪ್ರತಿಯೊಬ್ಬರನ್ನು ಪ್ರೀತಿಸುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಮನಸ್ಸುನ್ನು ಸಚ್ಚಿಂತನೆಗಳಿಂದ ಬದುಕು ಪಾವನವಾಗುತ್ತದೆ. ಬೇಗ ಬಂಧಮುಕ್ತಿಯಾಗಿ ಬಂದು ಹೊಸ ಜೀವನವನ್ನು ನಡೆಸುವ , ಸಮಾಜವನ್ನು ಗಟ್ಟಿಗೋಳಿಸುವ ಕಾರ್ಯ ನಿಮ್ಮಿಂದ ಆಗಬೇಕು ಆ ನಿಟ್ಟಿನಲ್ಲಿ ನಿಮ್ಮ ಜೀವನ ಸಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಕಾರಾಗೃಹದ ಅಧೀಕ್ಷಕ ಅಂಬರೀಷ್ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಸಿ.ಕೆ.ನಾವಲಗಿ, ಮಲ್ಲಿಕಾರ್ಜುನ ಈಟಿ, ಬಸನಗೌಡ ಪಾಟೀಲ, ವಿವೇಕ ಜತ್ತಿ, ಮೈಲಾರಲಿಂಗ ಉಪ್ಪಿನ, ದುಂಡಪ್ಪ ಕಿರಗಿ, ಶ್ರೀಮತಿ ವೀಣಾ ಹಿರೇಮಠ , ಶ್ರೀಮತಿ ರಾಜೇಶ್ವರಿ ಬೆಟ್ಟದಗೌಡರ, ಕಾರಾಗೃಹದ ಉಪ ಅಧೀಕ್ಷಕ ಎ.ಕೆ. ಅನ್ಸಾರಿ ಉಪಸ್ಥಿತರಿದ್ದರು.
ಕಾರಾಗೃಹದ ಮುಖ್ಯ ವೀಕ್ಷಕ ಶಕೀಲ ಜಕಾತಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಆರ್.ಎಲ್ ಮಿರ್ಜಿ ನಿರೂಪಿಸಿದರು.