ಬೆಂಗಳೂರು : ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದಂತ ಆಫ್ರೀಕನ್ ಪ್ರಜೆಯೊಬ್ಬ ಸಾವನ್ನಪ್ಪಿದ್ದನು. ಈ ಪ್ರಕರಣ ಸಂಬಂಧ ಠಾಣೆಯ ಮುಂದೆ ಅನೇಕ ಆಫ್ರೀಕನ್ ಪ್ರಜೆಗಳು ಪೊಲೀಸರ ಹಲ್ಲೆಯಿಂದ ಸಾವನ್ನಪ್ಪಿರೋದಾಗಿ ಪ್ರತಿಫಟನೆ ನಡೆಸುತ್ತಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ಉಂಟಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮೂಲಕ, ಪ್ರತಿಭಟನಾ ನಿರತರನ್ನು ಚದುರಿಸಿದ ಘಟನೆ ನಡೆದಿದೆ.
5 ಗ್ರಾಂ ಎಂಡಿಎಂ ಡ್ರಗ್ಸ್ ಜೊತೆಗೆ ಸಿಕ್ಕಿಬಿದ್ದಿದ್ದಂತ ಆಫ್ರಿಕನ್ ಪ್ರಜೆಯನ್ನು, ಜೆಸಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಅನಾರೋಗ್ಯದಿಂದಾಗಿ ಆಫ್ರಿಕನ್ ಪ್ರಜೆ ಅಸ್ವಸ್ಥಗೊಂಡಿದ್ದರಿಂದಾಗಿ, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ನೂರಾರು ಆಫ್ರಿಕನ್ ಪ್ರಜೆಗಳು, ಠಾಣೆಯ ಮುಂದೆ ಧರಣಿ ಪ್ರತಿಭಟನೆ ನಡೆಸಿದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೂ ಮುಂದಾದರು. ಇದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಜೊತೆಗೆ ಲಾಠಿ ಚಾರ್ಜ್ ಮೂಲಕ ಸ್ಥಳದಲ್ಲಿ ಪ್ರತಿಭಟನಾ ನಿರತರನ್ನು ಚದುರಿಸಲಾಗಿದೆ.
ಈ ಕುರಿತಂತೆ ಡಿಸಿಪಿ ಧರ್ಮೇಂದ್ರ ಕುಮಾರ್ ಮಾತನಾಡಿದ್ದು, ನಮ್ಮ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಆ ಕುರಿತಂತೆ 8 ರಿಂದ 9 ಆಫ್ರಿಕನ್ ಪ್ರಜೆಗಳನ್ನು ಬಂಧಿಸಲಾಗಿದೆ. ಎಫ್ ಐ ಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.