ಬೆಂಗಳೂರು: 8 ಜಿಲ್ಲೆಗಳಲ್ಲಿ ಕೊವಿಡ್ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ್ದೇನೆ. 2ನೇ ಅಲೆಯಲ್ಲೂ ಕೇರಳದಿಂದಲೇ ಸೋಂಕು ಹೆಚ್ಚಾಗಿತ್ತು. ಹೀಗಾಗಿ ಕೇರಳ ಗಡಿಯಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲು ಸೂಚಿಸಿದ್ದೇನೆ. ವ್ಯಾಕ್ಸಿನ್ ನೀಡುವುದನ್ನೂ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಕೊವಿಡ್ ಹೆಚ್ಚಿರುವ ಜಿಲ್ಲೆಗಳ ಜತೆ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ರಾಜ್ಯಕ್ಕೆ ವ್ಯಾಕ್ಸಿನ್ ಪ್ರಮಾಣ ಹೆಚ್ಚಿಸುವುದಾಗಿ ಕೇಂದ್ರ ಭರವಸೆ ನೀಡಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಕೇರಳ ಗಡಿಯಲ್ಲಿ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ನಾಳೆಯಿಂದಲೇ 2 ಡೋಸ್ ತೆಗೆದುಕೊಂಡಿದ್ದರೆ ಮಾತ್ರ ಕರ್ನಾಟಕಕ್ಕೆ ಪ್ರವೇಶಕ್ಕೆ ಅವಕಾಶ.
ನಾಳೆಯಿಂದಲೇ ಈ ನಿಯಮ ಅನ್ವಯ ಆಗಲಿದೆ. 72 ಗಂಟೆಯ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೊವಿಡ್ ನಿರ್ವಹಣೆ ಕಟ್ಟುನಿಟ್ಟಾಗಿ ಮಾಡಲು ಕೊವಿಡ್ ಹೆಚ್ಚಿರುವ ಜಿಲ್ಲಾಡಳಿತಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಡಿಸಿಗಳೇ ಖುದ್ದು ಮುಂದೆ ನಿಂತು ಕೊವಿಡ್ ನಿರ್ವಹಿಸಬೇಕು ಎಂದು ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಕೇರಳ, ಮಹಾರಾಷ್ಟ್ರದ ಪ್ರಯಾಣಿಕರ ಬಳಿ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಲಾಗಿದೆ.
ಕೊವಿಡ್ ನಿರ್ವಹಣೆ ಕಟ್ಟುನಿಟ್ಟಾಗಿ ಮಾಡಬೇಕು. ಜಿಲ್ಲಾಧಿಕಾರಿಗಳು ಖುದ್ದು ಮುಂದೆ ನಿಂತು ಕೊವಿಡ್ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೈ ಅಲರ್ಟ್ ಸೂಚನೆ ನೀಡಿದೆ. ಕೇರಳ ಸೇರಿದಂತೆ ಮಹಾರಾಷ್ಟ್ರದಲ್ಲೂ ಕೊವಿಡ್19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡ ಕೊರೊನಾ ಕೇಸ್ಗಳು ಮೂರಂಕಿಗೆ ಕಡಿಮೆ ಇಳಿಕೆಯಾಗಿಲ್ಲ. ಇನ್ನೂ ನೂರಕ್ಕಿಂತ ಅಧಿಕ ಕೇಸ್ಗಳು ದಿನನಿತ್ಯ ದಾಖಲಾಗುತ್ತಿದೆ. ಈ ಸಂಬಂಧ ರಾಜ್ಯದ 8 ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಭೆ ನಡೆಸಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಯವರು ಇಂದು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿ, ಜಿಲ್ಲಾ ಪಂಚಾಯತ್ ಸಿಇಒಗಳು ಹಾಜರಾಗಿದ್ದಾರೆ. ಬಿಬಿಎಂಪಿ ಸೇರಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಉಡುಪಿ ಸೇರಿ 8 ಜಿಲ್ಲಾಡಳಿತಗಳ ಜತೆ ಸಭೆ ನಡೆಸಲಾಗಿದೆ.