ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಹುತೇಕ ಪಕ್ಕಾ ಆಗಿದ್ದು, ಇದೇ ಮೊದಲ ಬಾರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬಗ್ಗೆ ಬಹಿರಂಗ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ. ಆದ್ರೆ ನನ್ನ ಕೆಲಸವನ್ನು ಮೆಚ್ಚಿ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಕೊಡುವ ಸೂಚನೆಯಂತೆ ನಾನು ಕೆಲಸಗಳನ್ನು ಮಾಡುತ್ತೇನೆ. ಜುಲೈ 25ರಂದು ವರಿಷ್ಠರು ಸ್ಪಷ್ಟ ಸಂದೇಶ ನೀಡುತ್ತಾರೆ. ಅವರು ನೀಡುವ ಸೂಚನೆಗೆ ನಾನು ಬದ್ಧ ಎಂದರು.
ಪಕ್ಷ ಸಂಘಟನೆ ಮಾಡಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ.ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿ ಕೆಲಸ ಮಾಡುತ್ತೇನೆ. ಮಠಾಧೀಶರು ನನಗೆ ನೀಡಿದ ಬೆಂಬಲ, ಆಶೀರ್ವಾದ ಇಡೀ ಜೀವನದಲ್ಲಿ ಯಾರಿಗೂ ಸಿಗದಷ್ಟು ಪ್ರೀತಿ, ವಿಶ್ವಾಸವಾಗಿದೆ. ಅಭಿಮಾನಿಗಳಾಗಲಿ, ಕಾರ್ಯಕರ್ತರಾಗಲಿ ಗೊಂದಲಕ್ಕೆ ಒಳಗಾಗಬಾರದು. ನನ್ನ ಪರ ಹೇಳಿಕೆಗಳನ್ನು ನೀಡುವುದು, ಪ್ರತಿಭಟನೆ ನಡೆಸುವುದು ಮಾಡಬಾರದು ಎಂದು ಹೇಳಿದರು.