ಬೆಂಗಳೂರು, ಜು.20- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವದೆಹಲಿಯಿಂದ ವಾಪಸಾದ ಎರಡು ದಿನಗಳ ನಂತರವೂ ನಾಯಕತ್ವ ಬದಲಾವಣೆಯ ಚರ್ಚೆ ಮುಂದುವರಿಯುತ್ತಲೇ ಇದೆ. ದೆಹಲಿಯಲ್ಲಿ ನಡೆದ ಚರ್ಚೆಗಳು ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಕೆಲ ಸಚಿವರು ಹೇಳುತ್ತಿದ್ದಾರೆ.
ಆದರೆ, ಈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ತಿಂಗಳಿನಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಿದ್ದಾರೆ. ಜುಲೈ 26ರಂದು ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ. ಆಗಸ್ಟ್ನಲ್ಲಿ ಏನು ಬೇಕಾದರೂ ಆಗಬಹುದು. ನಾವು ಕಾಯುತ್ತಿದ್ದೇವೆ ಎಂದು ಯಡಿಯೂರಪ್ಪ ಸಂಪುಟದ ಸಚಿವರೊಬ್ಬರು ತಿಳಿಸಿದ್ದಾರೆ.
ಆದರೆ, ದೆಹಲಿಯಿಂದ ಮರಳಿದ ನಂತರ ಸಿಎಂ ಯಡಿಯೂರಪ್ಪ ಅವರು ಒಕ್ಕಲಿಗ ನಿಗಮ ಸ್ಥಾಪಿಸುವುದರ ಜತೆಗೆ ಹಲವು ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆ ಮಾಡಿದ್ದಾರೆ. ದೆಹಲಿ ನಾಯಕರು ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ ಯಡಿಯೂರಪ್ಪ ಕಾರ್ಯವೈಖರಿ ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.
ಅಸೆಂಬ್ಲಿಯನ್ನು ವಿಸರ್ಜಿಸಲು ಶಿಫಾರಸು ಮಾಡುವುದು ಯಡಿಯೂರಪ್ಪ ಅವರ ಮುಂದೆ ಒಂದು ಆಯ್ಕೆಯಾಗಿರಬಹುದು. ಆದರೆ, ಅದು ಸಂಭವಿಸುವ ಸಾಧ್ಯತೆಯಿಲ್ಲ. ಹಿರಿಯ ಮಂತ್ರಿಯೊಬ್ಬರು ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡುವ ಕುರಿತು ಯಾವುದೇ ಚರ್ಚೆ ಅಥವಾ ಮಾತುಕತೆ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.
ಮೂಲಗಳ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಅಶೋಕ್ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ಅಧಿವೇಶನ ನಡೆಯುತ್ತಿರುವುದರಿಂದ ಕೇಂದ್ರ ನಾಯಕರುಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ದೆಹಲಿಗೆ ಯಡಿಯೂರಪ್ಪ ಭೇಟಿ ನೀಡಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸಲಾಯಿತೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.
ಆದರೆ, ಯಡಿಯೂರಪ್ಪ ಅನುಭವಿಗಳಿಗಿಂತ ಹೊಸ ತಂಡದ ಮೇಲೆ ಹೆಚ್ಚು ವಿಶ್ವಾಸವಿರಿಸಿದ್ದಾರೆ ಎಂದು ಮತ್ತೊಬ್ಬ ಸಚಿವರು ತಿಳಿಸಿದ್ದಾರೆ. ಯಡಿಯೂರಪ್ಪ ಅವರನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಸಾಮೂಹಿಕ ನಾಯಕತ್ವವನ್ನು ಯಾರೂ ಹೊಂದಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ನಡೆದ ಚರ್ಚೆ ಸಂಬಂಧ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿಲ್ಲ ಎಂದು ಮತ್ತೊಬ್ಬ ಸಚಿವರು ಹೇಳಿದ್ದಾರೆ. ಆದರೆ, ಇದೆಲ್ಲದರ ನಂತರವೂ ನಾಯಕತ್ವ ಬದಲಾವಣೆ ಚರ್ಚೆ ಇನ್ನೂ ಮುಂದುವರಿದಿದೆ.