ಮೈಸೂರು: ಜುಲೈ 19ರಂದು ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪರೀಕ್ಷೆ ಮುಗಿದಿದ್ದು, ಜುಲೈ 22 ರಂದು ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಸದ್ಯ ನಿನ್ನೆ ನಡೆದ ಪರೀಕ್ಷೆ ವೇಳೆ ಆದ ಘಟನೆಯೊಂದು ಭಾರಿ ಸುದ್ದಿಯಾಗಿದೆ. ಶಿಕ್ಷಣ ಸಚಿವರು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ. ಆದರೆ ಈ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಎಷ್ಟು ಪರದಾಡಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಮೈಸೂರು ಹೆಚ್.ಡಿ. ಕೋಟೆ ತಾಲೂಕಿನ ಶಿರಮಳ್ಳಿಗೆ ಪರೀಕ್ಷೆ ಬರೆಯಲು ಸುಮಾರು 2 ಕಿ.ಮೀ ಕೆಸರು ಗದ್ದೆಯಂತಿದ್ದ ರಸ್ತೆಯಲ್ಲಿ ನಡೆದು ಬಂದಿದ್ದಾರೆ.
ವಿದ್ಯಾರ್ಥಿಗಳು ಕೆಸರಂತಾಗಿದ್ದ ರಸ್ತೆಯಲ್ಲಿ ನಡೆದಾಡಿದ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರಸ್ತೆ ಹಾಳಾಗಿದ್ದು ರಸ್ತೆಯಲ್ಲಿ ಸಂಚಾರಿಸಲು ವಿದ್ಯಾರ್ಥಿಗಳು ಪರದಾಡಿದ್ದಾರೆ. ಕೊಂಚ ಯಾಮಾರಿದರೂ ಜಾರಿ ಬೀಳುವಂತಹ ಅಪಾಯದಲ್ಲೂ ಎಚ್ಚರದಿಂದ ಹೆಜ್ಜೆ ಹಾಕಿ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಬರೆದು ಬಂದಿದ್ದಾರೆ. ರಸ್ತೆ ಬಗ್ಗೆ ಸಾಕಷ್ಟು ದೂರು ನೀಡಿದರು ಸಮಸ್ಯೆ ಬಗೆಹರಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರು ಸಿಡಿದೆದ್ದಿದ್ದಾರೆ.
ಕೆಸರು ಗದ್ದೆಯಂತಿದ್ದ 2 ಕಿ.ಮೀ ರಸ್ತೆ ದಾಟಿ ಪರೀಕ್ಷೆ ಬರೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು