ಬಾಗಲಕೋಟೆ: ವಾಲ್ಮೀಕಿ ಸಮುದಾಯಕ್ಕೆ ರಾಜ್ಯದಲ್ಲಿ 70 ರಿಂದ 80 ಸೀಟು ಗೆಲ್ಲಿಸುವ ಸಾಮರ್ಥ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಭವನದಲ್ಲಿ ರವಿವಾರ ನಡೆದ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಎಸ್ಟಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಎಸ್ಟಿ ಸಮುದಾಯದ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮುದಾಯದ ಜನರಿಗೆ ಪಕ್ಷ ಸಂಘಟನೆ, ಸೈದ್ಧಾಂತಿಕ ತರಬೇತಿ:
ಬೇರೆ ಬೇರೆ ಪಕ್ಷಗಳತ್ತ ವಾಲಿರುವ ವಾಲ್ಮೀಕಿ ಸಮುದಾಯದ ಜನರನ್ನು ಸಂಘಟಿಸಿ ಕಾಂಗ್ರೆಸ್ ಪರವಾಗಿ ಮತ ಹಾಕಿಸುವುದೇ ನಮ್ಮ ಗುರಿ. ಮುಂದಿನ ದಿನಗಳಲ್ಲಿ ಸಮುದಾಯದ ಜನರಿಗೆ ಪಕ್ಷ ಸಂಘಟನೆ ಹಾಗೂ ಸೈದ್ಧಾಂತಿಕ ತರಬೇತಿ ನೀಡಿ ಕಾಂಗ್ರೆಸ್ ಸೇನಾನಿಗಳಾಗಿ ರೂಪಿಸಲಾಗುವುದು ಎಂದು ಹೇಳಿದರು.
ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ:
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಅಂಟಿನ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲಾಗುವುದು. ಎಲ್ಲ ಕಾರ್ಯಕರ್ತರು ಕೂಡ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಎಚ್.ವೈ. ಮೇಟಿ, ಮುಖಂಡರಾದ ಮುದುಕಪ್ಪ ಮಲ್ಲಾರಿ, ಸುಭಾಸ ಗಸ್ತಿ ಸೇರಿ ಸಮುದಾಯದ ಎಲ್ಲ ಕಾರ್ಯಕರ್ತರು, ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿ ಇನ್ನಿತರರು ಇದ್ದರು.