ಬೆಳಗಾವಿ: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ನಿಲ್ದಾಣದ ಮರು ನಿರ್ಮಾಣ ಕಾಮಗಾರಿಯು ಕುಂಟುತ್ತಾ ಸಾಗಿರುವುದು ಪ್ರಯಾಣಿಕರಿಗೆ ಶಾಪವಾಗಿ ಪರಿಣಮಿಸಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಬಸ್ಗಳ ಪ್ರಮುಖ ನಿಲ್ದಾಣ ಎಂಬ ಹೆಗ್ಗಳಿಕೆ ಗಳಿಸಿದ್ದು, ಸಿದ್ಧಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆ ಪ್ರಯಾಣಿಕರಿಂದ ಕೇಳಿಬರುತ್ತಿದೆ.
ಸದ್ಯ ಮಳೆಗಾಲವಾದ್ದರಿಂದ ಆವರಣವೆಲ್ಲವೂ ಕೆಸೆರು ಗದ್ದೆಯಂತಾಗಿದೆ. ಹೊಂಡ-ಗುಂಡಿಯೊಳಗೆ ಸರ್ಕಸ್ ಮಾಡಿಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಂಪು ಮಣ್ಣಿನ ಕೆಸರಿನಲ್ಲಿ ನಡೆದಾಡುವವರು ಕಾಲು ಜಾರಿ ಬಿದ್ದ ಘಟನೆಗಳೂ ನಡೆದಿವೆ. ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರಿನಲ್ಲಿರುವ ಈ ನಿಲ್ದಾಣ ದುಃಸ್ಥಿತಿಯಲ್ಲಿದೆ.ಲಕ್ಷ್ಯ ವಹಿಸಿಲ್ಲ:
ನೂರಾರು ಬಸ್ಗಳು, ಸಾವಿರಾರು ಪ್ರಯಾಣಿಕರು ಮತ್ತು ಜನರು ಸೇರುವ ಇಲ್ಲಿ ಒಂದೆಡೆ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ ಬಸ್ಗಳು ಕಾರ್ಯಾಚರಿಸುತ್ತಿವೆ. ಕಾಮಗಾರಿಗೆ ಸಕಾಲಕ್ಕೆ ಜಾಗ ಬಿಟ್ಟುಕೊಡದಿರುವುದು, ಅನುದಾನ ಕೊರತೆ, ಮೇಲುಸ್ತುವಾರಿಯಲ್ಲಿ ಆಗಿರುವ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳು ಲಕ್ಷ್ಯ ಕೊಡದಿರುವುದು ಮೊದಲಾದ ಕಾರಣಗಳಿಂದಾಗಿ ಭೌತಿಕ ಪ್ರಗತಿ ಆಮೆಗತಿಯಲ್ಲಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಇನ್ನೂ ಆಗಿಲ್ಲ