ಗದಗ : ಡಂಬಳ ಹೋಬಳಿ ಗ್ರಾಮಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ. ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದರೂ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಯವರು ಇತ್ತ ಕಣ್ಣೆತ್ತಿ ನೋಡದಿರುವುದು ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಡಂಬಳ, ಮೇವುಂಡಿ, ಪೇಠಾಆಲೂರ, ಕದಾಂಪೂರ, ಜಂತ್ಲಿ- ಶಿರೂರ, ಡೋಣಿ, ಹಳ್ಳಿಕೇರಿ, ಹಿರೇವಡ್ಡಟ್ಟಿ, ಮುರಡಿ ತಾಂಡ, ಹಳ್ಳಿಗುಡಿ ಗ್ರಾಮಗಳಲ್ಲಿ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮ ಮದ್ಯ ಮಾರಾಟ ಹಲವು ದಿನಗಳಿಂದ ನಡೆದು ಬಂದಿದೆ. ಹಲವು ಗ್ರಾಮಗಳ ಉಪಾಹಾರ ಮಂದಿರ, ಪಾನಶಾಪ್ಗಳಲ್ಲಿ ಕೂಡ ಕಾನೂನು ಬಾಹಿರವಾಗಿ ಯಾವುದೇ ಭಯಭೀತಿಯಿಲ್ಲದೇ ಅಕ್ರಮ ಚಟುವಟಿಕೆ ನಡೆಯುತ್ತಿವೆ.
ಲಾಕ್ಡೌನ್ ಎಫೆಕ್ಟ್: ಹೆಚ್ಚಿದ ಅಕ್ರಮ ಮದ್ಯದ ಹಾವಳಿ
ಮೇವುಂಡಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಕ್ರೀಡಾ ಯುವಕರ ಸಂಘವು ಸದಾ ಕ್ರೀಡೆ, ಸಂಸ್ಕೃತಿ, ಸಮಾಜ ಸೇವೆ ಸೇರಿ ವಿವಿಧ ಕಾರ್ಯಕ್ರಮಗಳಿಗೆ ತಾಲೂಕಿನಲ್ಲಿಯೇ ಹೆಸರು ವಾಸಿಯಾಗಿತ್ತು.
ಈ ಕಟ್ಟಡ ಇಂದು ಮದ್ಯ ವ್ಯಸನಿಗಳ, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಕೋವಿಡ್ನಿಂದ ಇತ್ತೀಚೆಗೆ ಶಾಲೆ- ಕಾಲೇಜು ಬಂದ್ ಆದಾಗಿನಿಂದ ಯುವಕರು ಓದಿನತ್ತ ಗಮನ ಹರಿಸದೆ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅವರಿಗೆಲ್ಲ ಇದುವೇ ಆಶ್ರಯತಾಣ ಆಗುತ್ತಿದೆ.
ನಮ್ಮ ಊರಲ್ಲಿ ಬೆಳಗ್ಗೆ ಕುಡಿಯುವ ನೀರು ಸಿಗದೆ ಇದ್ದರೂ ಅಕ್ರಮ ಮದ್ಯವಂತೂ ಎಲ್ಲಿ ಬೇಕಾದಲ್ಲಿ ಅಲ್ಲಿ ಸಿಗುತ್ತಿದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು ಎಂದು ಕದಾಂಪೂರ ಗ್ರಾಮಸ್ಥರು ಮಲ್ಲಮ್ಮ ಪಾಟೀಲ, ರುದ್ರಮ್ಮ ರಿತ್ತಿ ಅವರು ಹೇಳಿದ್ದಾರೆ.