ಬೆಳಗಾವಿ: ಇಲ್ಲಿಯ ನ್ಯೂ ಗಾಂಧಿ ನಗರ ಬಳಿ ಬೈಪಾಸ್ ರಸ್ತೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಹಿಡಿದು ಹಲ್ಲೆ ಮಾಡಿ ಜೇಬಿನಲ್ಲಿದ್ದ ನಗದು ಹಣ, ಎಟಿಎಂ ಕಾರ್ಡ್ ಹಾಗೂ ಕೈಗಡಿಯಾರ ದೋಚಿದ್ದ ಇಬ್ಬರು ಕದೀಮರನ್ನು ಕೇವಲ ಎರಡೇ ದಿನದಲ್ಲಿ ಪೊಲೀಸರು ಬಂಧಿ ಸಿದ್ದಾರೆ.
ನ್ಯೂ ಗಾಂಧಿ ನಗರದ ಆದಿಲ್ ಶಾ ಗಲ್ಲಿಯ ಫರ್ವೇಜ್ ಜಮೀರ ಪಾರಿಶವಾಡಿ ಹಾಗೂ ನ್ಯೂ ಗಾಂ ಧಿ ನಗರದ ಖುದಾದಾದ ಗಲ್ಲಿಯ ಜುಬೇರ್ ಅಬ್ದುಲ್‌ರಸೀದ ದಾಲಾಯತ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ನಗದು ಹಣ 18,500 ರೂ., ಮೊಬೈಲ್, ಎಟಿಎಂ ಕಾರ್ಡ್, ಕೈಗಡಿಯಾರ ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಿಕ್ಕೋಡಿ ತಾಲೂಕಿನ ಪಟ್ಟಣಕೋಡಿ ಗ್ರಾಮದ ತಮ್ಮಣ್ಣ ಮಲಗೌಡ ಸೋಮನ್ನವರ ಎಂಬವರು ಜು. 8ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನ್ಯೂ ಗಾಂ ಧಿ ನಗರ ಬಳಿಯ ಬೈಪಾಸ್ ರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿದ್ದಾರೆ.
ಕಾರಿನಿಂದಿಳಿದು ಬಾತ್ ರೂಮ್‌ಗೆ ಹೋಗಿ ವಾಪಸಾಗುತ್ತಿದ್ದಾಗ ಈ ಇಬ್ಬರೂ ದರೋಡೆಕೋರರನ್ನು ತಮ್ಮಣ್ಣ ಅವರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ನಂತರ ಅವರ ಜೇಬಿನಲ್ಲಿದ್ದ 1200 ರೂ. ಹಣ, ಕೈ ಗಡಿಯಾರ, ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ನಂತರ ಎಟಿಎಂ ಪಿನ್ ಪಡೆದು 20 ಸಾವಿರ ರೂ. ಹಣ ವಿತ್ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾಗಿದ್ದ ತಮ್ಮಣ್ಣ ಸೋಮನ್ನವರ ಅವರು ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳ್ಳರ ಪತ್ತೆಗೆ ಬೆನ್ನತ್ತಿದ್ದ ಎಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಸುನೀಲ್ ಪಾಟೀಲ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಹೊನ್ನಪ್ಪ ತಳವಾರ, ಎಎಸ್‌ಐ ಎ.ಬಿ. ಕುಂಡೇದ, ಸಿಬ್ಬಂದಿಗಳಾದ ಎಂ.ಇ. ಕುರೇರ, ಕೆ.ಬಿ. ಗೌರಾಣಿ, ಕೆ.ಡಿ. ನದಾಫ, ಜೆ.ಎನ್. ಭೋಸಲೆ, ಬಿ.ಎಂ. ಕಲ್ಲಪ್ಪನ್ನವರ, ಎಲ್.ಎಂ. ಮುಶಾಪುರೆ, ಎಸ್. ಎಂ. ಗುಡದೈಗೋಳ, ಮಾರುತಿ ಮಾದರ ಇದ್ದರು, ಮಾಳ ಮಾರುತಿ ಠಾಣೆ ಪೊಲೀಸರ ಕಾರ್ಯಕ್ಕೆ ಕಮಿಷನರ್ ಡಾ. ಕೆ. ತ್ಯಾಗರಾಜನ್ ಹಾಗೂ ಡಿಸಿಪಿ ಡಾ. ವಿಕ್ರಮ ಆಮ್ಟೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.