ಬೆಳಗಾವಿ: ಬೆಳೆದ ಬೆಳೆಗೆ ರೋಗ ತಗುಲಿದ್ದು ಯುವ ರೈತ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ತೋಟವನ್ನು ನಾಶಪಡಿಸಿರುವ ಘಟನೆ ಅಥಣಿ ತಾಲೂಕಿನ ಆಜೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ರೈತ ನವನಾಥ ಮಾನೆ ಎಂಬುವವರು ಸುಮಾರು 6 ವರ್ಷಗಳಿಂದ ಬೆಳೆಸುತ್ತಾ ಬಂದಿದ್ದ ದಾಳಿಂಬೆ ತೋಟವನ್ನು ತಾವೆ ಸ್ವತಃ ನಾಶ ಮಾಡಿದ್ದಾರೆ.
ಪ್ರತಿ ವರ್ಷ ಸುಮಾರು 4-5 ಲಕ್ಷದವರೆಗೆ ದಾಳಿಂಬೆ ತೋಟದ ನಿರ್ವಹಣೆಗೆ ಖರ್ಚು ಮಾಡಿರುವ ರೈತನಿಗೆ ದಾಳಿಂಬೆ ಹಣ್ಣಿಗೆ ದಾಳಿಯಿಟ್ಟ ಕೊಳೆರೋಗ ಅಂಥ್ರಾಕ್ನೋಸ್ ಬೆಳೆಯನ್ನೆ ಹಾಳು ಮಾಡುತ್ತಿದೆ. ಇದರಿಂದ ಅಂದಾಜು 10-12 ಲಕ್ಷ ರೂಪಾಯಿ ನಷ್ಟವನ್ನು ರೈತ ಅನುಭವಿಸಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕೊಳೆರೋಗದಿಂದಾಗಿ ದಾಳಿಂಬೆ ಹಣ್ಣಿಗೆ
ಮಳೆ ಹನಿಗಳು ಬಿದ್ದ ಜಾಗದಲ್ಲಿ ಕಪ್ಪು ಮಚ್ಚೆಗಳು ಕಾಣುತ್ತವೆ.
ಶಿಲೀಂಧ್ರದಿಂದ ಬರುವ ಈ ಕೊಳೆರೋಗವು ಕಾಯಿ, ಎಲೆ ಹಣ್ಣುಗಳ ಮೇಲೆ ಕೆಂಪು ಹಾಗೂ ಕಪ್ಪು ಸಣ್ಣ ಮಚ್ಚೆಗಳು ಕಂಡುಬಂದು ಇಡೀ ಹಣ್ಣು ಕೊಳೆಯುತ್ತಿದೆ. ದಿನದಿಂದ ದಿನಕ್ಕೆ ದಾಳಿಂಬೆ ಹಣ್ಣುಗಳು ಕೂಡ ನಾಶವಾಗುತ್ತಿವೆ. ಇದರಿಂದ ಮನನೊಂದು ಬೆಳೆಗಾರ ನವನಾಥ ಮಾನೆ ಸಂಪೂರ್ಣ ದಾಳಿಂಬೆ ಗಿಡಗಳನ್ನೇ ಕೊಡಲಿಯಿಂದ ಕಡಿದು ಹಾಕಿದ್ದಾರೆ.. ಈಗಾಗಲೇ ಸುಮಾರು 6000 ಕೆಜಿ ದಾಳಿಂಬೆ ಹಣ್ಣುಗಳನ್ನು ಕಿತ್ತು ಹತಾಶನಾಗಿ ಸುಟ್ಟುಹಾಕಿದ್ದಾರೆ.
ತಾಲೂಕಿನಲ್ಲಿ ಒಣಬೇಸಾಯ ಹೆಚ್ಚಾಗಿರುವುದರಿಂದ ಈ ಭಾಗದ ರೈತರು ದಾಳಿಂಬೆ ಬೆಳೆಯುತ್ತಿದ್ದಾರೆ. ಕೈ ತುಂಬಾ ಆದಾಯದ ಕನಸಲ್ಲಿ ಬೆಳೆಗೆ ರೋಗ ತಗುಲಿ ಮೈತುಂಬ ಸಾಲ ಮಾಡಿಕೊಂಡವರು ಹೆಚ್ಚಾಗಿದ್ದಾರೆ. ಹಾಗಾಗಿ ತಾಲೂಕಿನ ದಾಳಿಂಬೆ ಬೆಳೆದ ರೈತರಿಗೆ ಸರ್ಕಾರದಿಂದ ಪರಿಹಾರದ ಪ್ಯಾಕೇಜ್ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಬರಪೀಡಿತ ಉತ್ತರ ಕರ್ನಾಟಕದ ಹಲವಾರು ರೈತರು, ವಿಶೇಷವಾಗಿ ವಿಜಯಪುರ ಮತ್ತು ಅಥಣಿ ರೈತರು ತೋಟಗಾರಿಕೆ ಕೃಷಿಯಲ್ಲಿ ತೊಡಗಿದ್ದಾರೆ . ದ್ರಾಕ್ಷಿ, ದಾಳಿಂಬೆ ಮತ್ತು ನಿಂಬೆಯನ್ನು ಹೇರಳವಾಗಿ ಬೆಳೆಯುತ್ತಾರೆ. ತೋಟಗಾರಿಕೆ ಉತ್ಪನ್ನಗಳ ಒಂದು ದೊಡ್ಡ ಭಾಗವನ್ನು ಪ್ರತಿ ವರ್ಷ ಈ ಪ್ರದೇಶದಿಂದ ದೇಶದ ಮತ್ತು ಹೊರಗಿನ ಅನೇಕ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.
CKNEWSKANNADA / BRASTACHARDARSHAN CK NEWS KANNADA