ರಾಯಬಾಗ: ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ತಾಲೂಕಿನ ಕುಡಚಿ ವಿಧಾನಸಭಾ ಮತಕ್ಷೇತ್ರದ ಮುಗಳಖೋಡ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಇಂದು (ಶನಿವಾರ) ಸೈಕಲ್ ಜಾಥಾ ಜರುಗಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸೈಕಲ್ ಜಾಥಾ ಗೆ ಚಾಲನೆ ನೀಡಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 50 ಪೈಸೆ ಹೆಚ್ಚಳವಾದರೂ ಕೂಡ ಬಿಜೆಪಿ ನಾಯಕರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರು. ಆದರೆ, ಇಂದು ತೈಲ ಬೆಲೆ ಗಗನಕ್ಕೇರಿದರೂ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ದೇಶದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ ಅನಿವಾರ್ಯ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆ ಹಣ ಪಡೆಯುತ್ತಿರುವ ಇವರು ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಆ ಹಣದಿಂದ ಇವರೇನು ಕುಡಚಿ-ಬಾಗಲಕೋಟೆಗೆ ಬುಲೆಟ್ ಟ್ರೈನ್ ಬಿಡುತ್ತಾರೆಯೇ, ಇಲ್ಲ ಉತ್ತಮ ರಸ್ತೆಗಳನ್ನಾದರೂ ನಿರ್ಮಿಸಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.
ವೇಷ ಬದಲಾಯಿಸುವುದೇ ಮೋದಿ ಸಾಧನೆ:
ತಂಡದ ನಾಯಕರಾಗಿರುವ ಪ್ರಧಾನಿ ಮೋದಿಯೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಉಳಿದವರು ಏನು ಮಾಡುತ್ತಾರೆ. ತಮಿಳುನಾಡಿಗೆ ಹೋದರೇ ಲುಂಗಿ ಧರಿಸುವುದು, ಪಶ್ಚಿಮ ಬಂಗಾಳಕ್ಕೆ ಹೋದರೇ ರವೀಂದ್ರನಾಥ ಟ್ಯಾಗೋರ್ ಅವರಂತೆ ಗಡ್ಡ ಬಿಡುವುದು ಸೇರಿ ಹೋದಲ್ಲೆಲ್ಲ ವೇಷ ಬದಲಾಯಿಸುವುದು ಪ್ರಧಾನಿ ಮೋದಿಯ ಸಾಧನೆ ಎಂದು ವ್ಯಂಗ್ಯವಾಡಿದರು.
ಸೈಕಲ್ ಸವಾರಿ ಮಾಡಿದ ಸತೀಶ್:
ಸತೀಶ ಜಾರಕಿಹೊಳಿ ಅವರು ಸ್ವತಃ ಸೈಕಲ್ ಚಲಾಯಿಸುವ ಮೂಲಕ ರ್ಯಾಲಿಯಲ್ಲಿ ಭಾಗವಹಿಸಿದರು. ಪಟ್ಟಣದ ವಿವಿಧ ರಸ್ತೆಗಳಲ್ಲಿ ಜಾಥಾ ಸಂಚರಿಸಿತು. ಜಾಥಾ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲದೇ ಸತೀಶ ಅವರ ಅಭಿಮಾನಿಗಳು, ಸಾರ್ವಜನಿಕರು ಕೂಡ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿ ಇನ್ನಿತರ ಮುಖಂಡರು ಭಾಗವಹಿಸಿದ್ದರು.