ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಲಾಗುತ್ತದೆ. ವಾರದೊಳಗೆ ಪ್ರಕ್ರಿಯೆ ಮುಗಿಸಲು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಮೂರು ವರ್ಷ ಅವಧಿ ಪೂರ್ಣಗೊಂಡಿದೆ. ಇನ್ನು ಕೆಲವೆಡೆ ಬದಲಾವಣೆ ಮಾಡುವಂತೆ ಬೇಡಿಕೆಯೂ ಸಹ ಇದೆ. ಕೆಲವರು ಸ್ವಯಂ ಪ್ರೇರಿತವಾಗಿ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷರ ಬದಲಾವಣೆ ವಿಚಾರವಾಗಿ ಸಭೆ ನಡೆಸಿ, ಚರ್ಚೆ ನಡೆಸಲಾಗುತ್ತದೆ. ಬಳಿಕ ಅಧ್ಯಕ್ಷರಾಗುವ ಪಟ್ಟಿಯನ್ನು ಅಧ್ಯಕ್ಷರಿಗೆ ಕಳಿಸಲಾಗುತ್ತದೆ. ಎಲ್ಲರೂ ಕುಳಿತು ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಕೆಲವು ಕಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ, ಇತರ ಪದಾಧಿಕಾರಿಗಳ ಬದಲಾವಣೆ ಕೂಡ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ನಮ್ಮ ಪಕ್ಷದಲ್ಲೇ ಇಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯೇ ಇಲ್ಲ. ಕಾಂಗ್ರೆಸ್ ಗೆ ನಾವು ಅವರನ್ನು ಕರೆದಿಲ್ಲ. ಹಾಗಾಗಿ ಅವರ ಹೇಳಿಕೆಗೆ ಮಹತ್ವವಿಲ್ಲವೆಂದರು.