ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ ಚರ್ಚೆ; ಜಿಲ್ಲಾಡಳಿತದ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಣೆ
ಬೆಳಗಾವಿ: “ಬಳ್ಳಾರಿ ನಾಲಾದ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ತುಮ್ಮರಗುದ್ದಿ ಬಳಿ ಎಸ್ಟಿಪಿ ಘಟಕ ನಿರ್ಮಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಆಗ್ರಹಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ ಅವರು, “ಈಗಾಗಲೇ ಹಲಗಾ ಬಳಿ ಎಸ್ಟಿಪಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ ತುಮ್ಮರಗುದ್ದಿ ಬಳಿ ಇನ್ನೊಂದು ಎಸ್ಟಿಪಿ ಘಟಕ ನಿರ್ಮಾಣ ಮಾಡಬೇಕು” ಎಂದು ಮನವಿ ಮಾಡಿದರು.
“ಬೆಳಗಾವಿ ನಗರದಿಂದ ಹರಿದುಬರುವ ಬಳ್ಳಾರಿ ನಾಲಾದ ಕಲುಷಿತ ನೀರಿನಿಂದ ಬೆಳಗಾವಿ, ಹುಕ್ಕೇರಿ ಹಾಗೂ ಗೋಕಾಕ ತಾಲೂಕಿನ ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ನಾಲಾದ ನೀರನ್ನು ಸ್ವಚ್ಛ ಮಾಡಿ, ಬಿಡುವುದೇ ಇದಕ್ಕೆ ಪರಿಹಾರವಾಗಿದೆ. ಹಲಗಾ ಹಾಗೂ ತುಮ್ಮರಗುದ್ದಿ ಬಳಿ ಎಸ್ಟಿಪಿ ಘಟಕ ನಿರ್ಮಿಸುವುದರಿಂದ ನೀರನ್ನು ಸ್ವಚ್ಛಗೊಳಿಸಬಹುದಾಗಿದೆ” ಎಂದು ಸಲಹೆ ನೀಡಿದರು.
ಆಣೆಕಟ್ಟು ತಲುಪುವುದರೊಳಗೆ ಸ್ವಚ್ಛಗೊಳ್ಳಲಿ:
“ಕಬಲಾಪುರ ಹಾಗೂ ಸಿದ್ದನಹಳ್ಳಿ ಗ್ರಾಮದ ಮಧ್ಯೆ ಹರಿಯುವ ಬಳ್ಳಾರಿ ನಾಲಾಕ್ಕೆ ಅಡ್ಡಲಾಗಿ ಈಗಾಗಲೇ 600 ಕೋಟಿ ರೂ. ವೆಚ್ಚದಲ್ಲಿ ಆಣೆಕಟ್ಟು ನಿರ್ಮಿಸಲಾಗುತ್ತಿದೆ. ನೀರು ಆಣೆಕಟ್ಟು ಸೇರುವ ಮುನ್ನ ಸ್ವಚ್ಛಗೊಳಿಸಿ ಬಿಡುವುದರಿಂದ, ರೈತರು ಹಾಗೂ ಸುತ್ತಲಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ತುಮ್ಮರಗುದ್ದಿ ಸಮೀಪದ ರೈಲ್ವೆ ಹಳಿ ಬಳಿ ಇರುವ ನಾಲಾ ಸೇತುವೆಯ ಹತ್ತಿರ ಎಸ್ಟಿಪಿ ಘಟಕ ನಿರ್ಮಿಸುವುದು ಉತ್ತಮ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ, ಯೋಜನೆ ಸಿದ್ಧಪಡಿಸಬೇಕು” ಎಂದು ಮನವಿ ಮಾಡಿದರು.
ಸೂಕ್ತ ಪರಿಹಾರ ನೀಡಿ:
ಕಬಲಾಪುರ ಹಾಗೂ ಸಿದ್ದನಹಳ್ಳಿ ಗ್ರಾಮದ ಮಧ್ಯೆ ಹರಿಯುವ ಬಳ್ಳಾರಿ ನಾಲಾಕ್ಕೆ ನಿರ್ಮಿಸಲಾಗುತ್ತಿರುವ ಆಣೆಕಟ್ಟಿನಿಂದ ಭೂಮಿ ಕಳೆದುಕೊಂಡಿರುವ ಕಬಲಾಪುರ, ಸಿದ್ದನಹಳ್ಳಿ ಹಾಗೂ ಮಾಸ್ತಿಹೊಳಿ ಗ್ರಾಮಗಳ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈ ಗ್ರಾಮಗಳು ಕಾಲುವೆಯ ಹಿನ್ನೀರಿನಿಂದ ಮುಳುಗಡೆಯಾಗುತ್ತವೆ. ಹೀಗಾಗಿ, ಇವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು” ಎಂದು ರೈತರ ಪರವಾಗಿ ಸತೀಶ ಜಾರಕಿಹೊಳಿ ಅವರು ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿದರು.
ಜಿಲ್ಲಾಧಿಕಾರಿಗಳಿಂದ ಕ್ರಮದ ಭರವಸೆ:
ಸತೀಶ ಜಾರಕಿಹೊಳಿ ಅವರ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸ್ಪಂದನೆ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಮಹಾನಗರ ಪಾಲಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಡಳಿತದ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಣೆ:
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಕಾರ್ಯಾಲಯದ ಎಲ್ಲ ಸಿಬ್ಬಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸತೀಶ ಶುಗರ್ಸ್ ವತಿಯಿಂದ ಸ್ಯಾನಿಟೈಸರ್ ವಿತರಣೆ ಮಾಡಿದರು.
ಆದಷ್ಟು ಬೇಗ ಜಿಲ್ಲೆ ಕೊರೊನಾ ಮುಕ್ತವಾಗಲಿ. ಜಿಲ್ಲೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯಶಸ್ಸು ಸಿಗಲಿ ಎಂದು ಸತೀಶ ಅವರು ಆಶಿಸಿದರು.