ಗೋಕಾಕ: “ಕೊರೊನಾ ಹಿನ್ನೆಲೆಯಲ್ಲಿ ರಾಜ್ಯವನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಜನಸಾಮಾನ್ಯರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ತರು ತೊಂದರೆಗೀಡಾಗಿದ್ದಾರೆ. ಹೀಗಾಗಿ, ಸರ್ಕಾರ ಇವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದೆ. ಕೆಲವು ದಿನಗಳ ಹಿಂದೆ 2 ದಿನ ಅರ್ಧ ಬಂದ್ ಮಾಡಿದರು. ಈಗ 14 ದಿನ ಸಂಪೂರ್ಣ ಬಂದ್ ಮಾಡಿದ್ದಾರೆ. ಇದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ” ಎಂದರು.
“ಸಂಪೂರ್ಣ ಬಂದ್ ಮಾಡಿರುವುದರಿಂದ ಜನರು ಪಟ್ಟಣಗಳಿಂದ ತಮ್ಮ, ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಬಸ್ ಸೌಲಭ್ಯ ಇಲ್ಲದಿರುವುದರಿಂದ ಅನೇಕರು, ತಮ್ಮ ಊರುಗಳಿಗೆ ನಡೆದುಕೊಂಡೇ ಹೊರಟಿದ್ದಾರೆ. ಈಗ ಮತ್ತೆ ಕಳೆದ ಬಾರಿಯಾದಂತೆ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು” ಎಂದು ಹೇಳಿದರು.
ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ:
“ಸರ್ಕಾರದ ಕೈಯ್ಯಲ್ಲಿ ಎಲ್ಲವೂ ಇದೆ. ಆದರೆ, ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ. ಉದಾಹರಣೆಗೆ ಬೆಳಗಾವಿ ಎಪಿಎಂಸಿಯ ತರಕಾರಿ ಮಾರುಕಟ್ಟೆ 20 ಎಕರೆ ಪ್ರದೇಶವನ್ನು ಹೊಂದಿದೆ. ಸರ್ಕಾರದ ಆದೇಶದಂತೆ ಅದನ್ನು 3 ಎಕರೆ ಹೊರಾಂಗಣ ಪ್ರದೇಶಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದರು. 20 ಎಕರೆ ಇರುವ ಮಾರುಕಟ್ಟೆಯನ್ನು 3 ಎಕರೆ ಪ್ರದೇಶಕ್ಕೆ ಹೇಗೆ ಹೊಂದಿಸುತ್ತಾರೆ” ಎಂದು ಸತೀಶ ಮಾಧ್ಯಮದವರನ್ನು ಪ್ರಶ್ನಿಸಿದರು.
“ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳನ್ನು ನಾನು ಭೇಟಿ ಮಾಡಿ, ಬೇರೆ ಬೇರೆ ಸ್ಥಳಗಳಿಗೆ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವಂತೆ ಚರ್ಚಿಸಿದ್ದೇನೆ” ಎಂದು ತಿಳಿಸಿದರು.
“ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿರೋಧ ಪಕ್ಷ ಹಾಗೂ ಜನರ ಮಾತು ಕೇಳಲು ತಯಾರಿಲ್ಲ. ಹೀಗಾಗಿ, ಸರ್ಕಾರದ ನಿರ್ಧಾರಕ್ಕೆ ಜನರೇ ಹೊಂದಿಕೊಳ್ಳಬೇಕಾದ ಪರಿಸ್ಥಿತಿ ಇದೆ” ಎಂದು ಸತೀಶ ಅಸಮಾಧಾನ ವ್ಯಕ್ತಪಡಿಸಿದರು.