ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರರು ಹಾಗೂ ಯುವ ಮುಖಂಡರಾದ ಪ್ರಿಯಾಂಕಾ ಹಾಗೂ ರಾಹುಲ್ ಜಾರಕಿಹೊಳಿ ಅವರು ಬಡ, ಪ್ರತಿಭಾವಂತ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಸ್ಥಳೀಯ ವಿದ್ಯಾರ್ಥಿ ಸುರೇಶ ಪೂಜೇರಿ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಇಂಜಿನಿಯರಿಂಗ್ ವಿದ್ಯಾಭ್ಯಾಸ ಕೈಗೊಂಡಿದ್ದಾನೆ. ಆತನಿಗೆ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್ ನ ಅಗತ್ಯವಿತ್ತು. ಈ ವಿಷಯ ಅರಿತ ಪ್ರಿಯಾಂಕಾ ಹಾಗೂ ರಾಹುಲ್ ಅವರು ಸೋಮವಾರ ವಿದ್ಯಾರ್ಥಿಯನ್ನು ತಮ್ಮ ಹಿಲ್ ಗಾರ್ಡನ್ ಕಚೇರಿಗೆ ಕರೆಸಿ 70 ಸಾವಿರ ರೂ. ಮೊತ್ತದ ಲ್ಯಾಪ್ ಟಾಪ್ ಕೊಡಿಸಿದ್ದಾರೆ.
ಅಗತ್ಯಬಿದ್ದರೇ ಮತ್ತೆ ಸಹಾಯ ಮಾಡುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮೊಟಕುಗೊಳಿಸದೇ ಚೆನ್ನಾಗಿ ಅಧ್ಯಯನ ನಡೆಸುವಂತೆ ವಿದ್ಯಾರ್ಥಿಗೆ ಧೈರ್ಯ ತುಂಬುವ ಮೂಲಕ ಅವರು ಪ್ರೋತ್ಸಾಹಿಸಿದ್ದಾರೆ.
“ನನಗೆ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್ ನ ಅಗತ್ಯವಿತ್ತು. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದಿದ್ದರಿಂದ ಅದನ್ನು ಕೊಂಡುಕೊಳ್ಳುವ ಶಕ್ತಿ ಇರಲಿಲ್ಲ. ಲ್ಯಾಪ್ ಟಾಪ್ ಕೊಡಿಸಿ ನನಗೆ ಅನುಕೂಲ ಮಾಡಿಕೊಟ್ಟ ಪ್ರಿಯಾಂಕಾ ಹಾಗೂ ರಾಹುಲ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ವಿದ್ಯಾರ್ಥಿ ಸುರೇಶ ಕೃತಜ್ಞತೆ ಸಲ್ಲಿಸಿದ್ದಾನೆ.
ಈ ಸಂದರ್ಭದಲ್ಲಿ ಯಲ್ಲಪ್ಪ ತಲ್ಲೂರ, ಅಡಿವೆಪ್ಪ ಮಾಳಗಿ, ಚನ್ನಬಸು ಮಾಳಗಿ, ಅಜ್ಜಪ್ಪ ಮಾಳಗಿ, ವಿಠ್ಠಲ ಪರಸನ್ನವರ, ಪಾಂಡು ರಂಗಸುಬೆ, ಎ.ಬಿ. ಕಾಜಿ ಹಾಗೂ ವಿದ್ಯಾರ್ಥಿಯ ಕುಟುಂಬಸ್ಥರು ಇದ್ದರು.