ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಪ್ರಮುಖ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸುವ ಮೂಲಕ ಪ್ರಕರಣದ ಜಾಲ ಭೇದಿಸಿದ್ದಾರೆ.
ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದ ಶಿವಲಿಂಗ್ ಪಾಟೀಲ ಎಂಬಾತ ಕಿಂಗ್ ಪಿನ್ ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದನು. ಕಳೆದ 10-12 ದಿನಗಳಿಂದ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.
ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಫರ್ನಿಚರ್ ಫ್ಯಾಕ್ಟರಿ ನಡೆಸುತ್ತಿದ್ದ ಶಿವಲಿಂಗ ಪಾಟೀಲನ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದರು.
ಬೆಂಗಳೂರು ಹಾಗೂ ತುಮಕೂರಿನ ಆರೋಪಿಗಳನ್ನು ಬಂಧಿಸಿದಾಗ ಅವರು ಬಾಯಿ ಬಿಟ್ಟ ಹೆಸರುಗಳ ಪೈಕಿ ಶಿವಲಿಂಗ ಉತ್ತರ ಕರ್ನಾಟಕದಲ್ಲಿ ಪ್ರಮುಖ ಆರೋಪಿ ಆಗಿದ್ದನು ಎನ್ನಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಹಣ ಪಡೆದು ಪ್ರಶ್ನೆ ಪತ್ರಿಕೆ ನೀಡುತ್ತಿದ್ದ ಈ ಜಾಲ ಇಡೀ ರಾಜ್ಯದಲ್ಲಿ ವ್ಯಾಪಿಸಿದ್ದು, ಇದರಲ್ಲಿ ಅನೇಕ ಪ್ರಭಾವಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.