ಬೆಂಗಳೂರು: ಮನೆಯಲ್ಲಿ ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಅವರ ಬಿಪಿಎಲ್ ಕಾರ್ಜ್ ಅನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು, ಸಾರ್ವಜನಿಕರಿಂದ ಹಾಗೂ ಸ್ವಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಯೂಟರ್ನ್ ಹೊಡೆದಿದ್ದು, ಬಿಪಿಎಲ್ ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಮಾನದಂಡಗಳೇ ಮುಂದುವರಿಸಲಾಗುವುದು ಎಂದು ಸೋಮವಾರ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಉಮೇಶ್ ಕತ್ತಿ ಅವರು, ನಾನು ಸಚಿವನಾದ ನಂತರ ಯಾವುದೇ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಬಿಪಿಎಲ್ ಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಅವರು, ‘ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಮತ್ತು ವರ್ಷಕ್ಕೆ 1.20 ಲಕ್ಷ ರೂಗಿಂತ ಅಧಿಕ ವರಮಾನ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ. ಏಪ್ರಿಲ್ ಬಳಿಕ ಸರ್ಕಾರ ಬಿಪಿಎಲ್ ಕಾರ್ಡುದಾರರ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಈ ಎಲ್ಲ ಸೌಲಭ್ಯಗಳು ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದರೆ ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದರು.
CKNEWSKANNADA / BRASTACHARDARSHAN CK NEWS KANNADA