ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ಏತ ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಗೌರವಾನ್ವಿತ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವುದನ್ನು ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಸ್ವಾಗತಿಸಿದ್ದಾರೆ.
ಕರ್ನಾಟಕ ವಿಧಾನ ಮಂಡಲದ ಉಭಯ ಸದಸ್ಯರನ್ನು ಉದ್ದೇಶಿಸಿ ಗೌರವಾನ್ವಿತ ರಾಜ್ಯಪಾಲ ವಾಜುಭಾಯಿವಾಲರವರು ಮಾತನಾಡಿರುವ ಅಂಶಗಳಿಗೆ ಪ್ರತಿಕ್ರಿಯಿಸಿರುವ ಸಚಿವ ರಮೇಶ್À ಜಾರಕಿಹೊಳಿ, ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸಲು 300 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಹಾಗೆಯೇ ರಾಜ್ಯದ 1.88 ಲಕ್ಷ ಹೆಕ್ಟೇರ್ ಭೂಮಿಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮಳೆ ನೀರು ಕೊಯ್ಲು ರಚಿಸಿ ಮಳೆಯಾಶ್ರಿತ 2.76 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಿರುವುದು ಅಭಿನಂದನೀಯ ಎಂದು ತಿಳಿಸಿದ್ದಾರೆ.
32.878 ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಯೋಜನೆ ಅಳವಡಿಸಿರುವುದು, ಮಳೆ ನೀರು ಕೊಯ್ಲು ನಿರ್ಮಿತಿಗಳ ನಿರ್ಮಾಣಕ್ಕೆ ರಾಜ್ಯದ 21 ಜಿಲ್ಲೆಗಳಲ್ಲಿ ಕೃಷಿ ಪುನಶ್ಚೇತನ ಯೋಜನೆ ಅನುಷ್ಠಾನಕ್ಕೆ 600 ಕೋಟಿ ರೂಪಾಯಿಗಳ ಅನುದಾನ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸರ್ಕಾರಿ ಶಾಲೆಗಳ ದತ್ತು ಪಡೆಯುವ ಯೋಜನೆಯಲ್ಲಿ ಇಲ್ಲಿಯವರೆಗೂ 1500 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವುದು ಅಭಿವೃದ್ಧಿಯ ಸೂಚಕವಾಗಿದೆ. ನಾನು ಸಹಾ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ 5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದೇನೆ ಮತ್ತು ನನ್ನ ಸ್ನೇಹಿತರಿಗೂ ಶಾಲೆಗಳನ್ನು ದತ್ತು ಪಡೆಯಲು ಪ್ರೇರೇಪಿಸಿದ್ದೇನೆ. ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮದ ಬಗ್ಗೆ ಗೌರವಾನ್ವಿತ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವುದು ಮಾದರಿಯಾಗಿದೆ ಎಂದು ಸಚಿವ ರಮೇಶ್À ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಸೇರಿದಂತೆ ಕಲಬರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24ಘಿ7 ನೀರು ಸರಬರಾಜು ಮಾಡಲು 2,848 ಕೋಟಿ ರೂಪಾಯಿಗಳ ಯೋಜನೆ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ ಹಾಗೆಯೇ ಗಂಗಾ ಕಲ್ಯಾಣ ನೀರಾವರಿ ಯೋಜನೆಗಳಿಗೆ 215 ಕೋಟಿ ರೂ.ಗಳನ್ನು ವೆಚ್ಚ ಮಾಡಿರುವುದು ಸರ್ಕಾರ ಜನಸ್ನೇಹಿ ಅನ್ನುವುದಕ್ಕೆ ಪೂರಕವಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ರಾಜ್ಯಪಾಲರ ಭಾಷಣದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಕಳೆದ 2020 ರ ಆಗಸ್ಟ್ ನಿಂದ ಅಕ್ಟೋಬರ್ ತಿಂಗಳವರೆಗೆ ಕಂಡು ಕೇಳರಿಯದ ಅತಿವೃಷ್ಟಿ ಪ್ರವಾಹ ಉಂಟಾಗಿದ್ದು ಆ ದುರ್ಘಟನೆಯ ಪರಿಹಾರಕ್ಕಾಗಿ ಸರ್ಕಾರ 6200 ಕೋಟಿ ರೂಪಾಯಿಗಳನ್ನು ನೀಡಿದೆ ಮತ್ತು 5.016 ಜನರನ್ನು ಪ್ರವಾಹದಿಂದ ರಕ್ಷಿಸಿರುವುದನ್ನು ಗೌರವಾನ್ವಿತ ರಾಜ್ಯಪಾಲರು ಉಲ್ಲೇಖಿಸಿರುವುದು ಶ್ಲಾಘನೀಯ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.