Breaking News

ಕೆಎಂಎಫ್‍ಗೆ ಹಾಲು ನೀಡುವ ರೈತರ ಮಕ್ಕಳಿಗೆ ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದ ಹೈಟೆಕ್ ಹಾಸ್ಟೇಲ್ ನಿರ್ಮಾಣ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ


ಗೋಕಾಕ : ಕೆಎಂಎಫ್‍ಗೆ ಹಾಲು ಪೂರೈಸುತ್ತಿರುವ ರೈತರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಬೆಳಗಾವಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವಸತಿ ನಿಲಯವನ್ನು ನಿರ್ಮಿಸಿಕೊಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಏರ್ಪಡಿಸಿದ್ದ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಇನಾಫ್ ತಂತ್ರಾಂಶವನ್ನು ಒಳಗೊಂಡ ಟ್ಯಾಬ್ ಮತ್ತು ಒಕ್ಕೂಟದ ಕಲ್ಯಾಣ ನಿಧಿಯಿಂದ ಫಲಾನುಭವಿಗಳಿಗೆ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರ ಮಕ್ಕಳಿಗೆ ಅನುಕೂಲವಾಗಲು ಕೆಎಂಎಫ್‍ನಿಂದ 1.50 ಕೋಟಿ ರೂ. ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ 1.50 ಕೋಟಿ ರೂ.ಗಳನ್ನು ವ್ಯಯಿಸಿ 3 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ಆರಂಭಿಸಲಾಗುವುದು. 100 ರಿಂದ 150 ಮಕ್ಕಳಿಗೆ ವಸತಿ ನಿಲಯದ ಪ್ರಯೋಜನ ಸಿಗಲಿದೆ ಎಂದು ಹೇಳಿದರು.
ಕೆಎಂಎಫ್‍ನ ನಂದಿನಿ ಹಾಲು ರಾಜ್ಯವಲ್ಲದೇ ಅನ್ಯ ರಾಜ್ಯಗಳಲ್ಲಿಯೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ಗ್ರಾಹಕರ ಮನೆ ಮಾತಾಗಿವೆ. ಜೊತೆಗೆ ದಿನನಿತ್ಯ ಗ್ರಾಹಕರಿಂದ ಬೇಡಿಕೆಗಳು ಬರುತ್ತಲೇ ಇವೆ. ದೇಶದಲ್ಲಿ ಸಹಕಾರಿ ಸ್ವಾಮ್ಯದ ಅಮೂಲ್ ನಂತರ ಕೆಎಂಎಫ್‍ನ ನಂದಿನಿ ಮೊದಲ ಸ್ಥಾನದಲ್ಲಿದೆ. ಮಾರುಕಟ್ಟೆಯನ್ನು ದೇಶದ ವಿವಿಧ ಭಾಗಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ ಯೋಜನೆ(ಕೆಸಿಸಿ)ಯಡಿಯಲ್ಲಿ ಪ್ರತಿ ಆಕಳಿಗೆ ಪ್ರತಿ ತಿಂಗಳಿಗೆ 7 ಸಾವಿರ ರೂ.ಗಳಂತೆ ಮತ್ತು ಪ್ರತಿ ಎಮ್ಮೆಗೆ ತಿಂಗಳಿಗೆ 8 ಸಾವಿರ ರೂ.ಗಳಂತೆ ಸಾಕಾಣಿಕೆಗಾಗಿ ಸಾಲವನ್ನು ನೀಡುತ್ತಿದೆ. ಈ ಸಾಲವನ್ನು ಒಕ್ಕೂಟಗಳಿಗೆ ಹಾಲು ಪೂರೈಸುತ್ತಿರುವ ಸಹಕಾರಿ ಸಂಘಗಳ ಸದಸ್ಯರುಗಳಿಗೆ ನೀಡಲಾಗುತ್ತಿದೆ. ಈ ಸಾಲಕ್ಕೆ ಶೇ 9 ರಷ್ಟು ಬಡ್ಡಿ ಇದ್ದು, ಅದರಲ್ಲಿ ಶೇ 2 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿ ಮಾಡುತ್ತಿರುವ ರೈತರಿಗೆ ಶೇ 3 ರಷ್ಟು ಮನ್ನಾ ಮಾಡಲು ಸರ್ಕಾರ ಈಗಾಗಲೇ ಘೋಷಿಸಿದೆ. ಉಳಿದ ಶೇ 4 ರಷ್ಟು ಫಲಾನುಭವಿಗಳೇ ಭರಿಸಬೇಕಾಗುತ್ತದೆ. ಕೆಲವೊಂದು ರಾಷ್ಟ್ರೀಕೃತ ಬಾಂಕುಗಳು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಸಾಲ ನೀಡಲು ಸಹಕರಿಸುತ್ತಿಲ್ಲ. ಹೀಗಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಗೋ ಸುರಕ್ಷಾ ಯೋಜನೆಯಡಿ ಶೇ 75 ರಷ್ಟು ವಿಮೆ ಕಂತನ್ನು ಒಕ್ಕೂಟಗಳ ಮೂಲಕ ಪಾವತಿಸಿ ಇನ್ನುಳಿದ ಶೇ 25 ರಷ್ಟು ಫಲಾನುಭವಿಗಳು ಭರಿಸಿ ಒಟ್ಟು 50 ಸಾವಿರ ರೂ.ಗಳವರೆಗಿನ ರಾಸುಗಳಿಗೆ ಒಂದು ವರ್ಷದ ವಿಮೆ ಸೌಲಭ್ಯವನ್ನು ಮಾಡಿಸಲಾಗುತ್ತಿದ್ದು, ಇದರ ಸೌಲಭ್ಯವನ್ನು ರೈತ ಸಮುದಾಯ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಇನಾಫ್ ತಂತ್ರಾಂಶವನ್ನು ಒಳಗೊಂಡಿರುವ ಟ್ಯಾಬ್‍ನ್ನು ಒಕ್ಕೂಟಗಳಿಗೆ ಸರಬರಾಜು ಮಾಡುತ್ತಿರುವ ಸದಸ್ಯರುಗಳ ಕೃತಕ ಗರ್ಭಧಾರಣ ಮಾಹಿತಿಯನ್ನು ದಾಖಲಿಸಿಕೊಳ್ಳುವುದು ಮತ್ತು ಅದರ ವಿವರವಾದ ಮಾಹಿತಿಯನ್ನು ದಾಖಲಿಸುವುದು ಇದರ ಉದ್ಧೇಶವಾಗಿದೆ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಸಂಘಗಳಿಗೆ ಟ್ಯಾಬ್‍ಗಳನ್ನು ಮತ್ತು ಒಕ್ಕೂಟದ ಕಲ್ಯಾಣ ನಿಧಿಯಿಂದ ಫಲಾನುಭವಿಗಳಿಗೆ ಚೆಕ್‍ಗಳನ್ನು ವಿತರಿಸಿದರು.
ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲು ಪಾಟೀಲ, ಉದಯಸಿಂಗ ಶಿಂಧೆ, ಸವಿತಾ ಖಾನಪ್ಪನವರ, ರಾಮಣ್ಣಾ ಬಂಡಿ, ವ್ಯವಸ್ಥಾಪಕ ನಿರ್ದೇಶಕ ಒಬೇದುಲ್ಲಾಖಾನ್, ವ್ಯವಸ್ಥಾಪಕ ಡಾ.ಜೆ.ಆರ್. ಮನ್ನೇರಿ, ಉಪವ್ಯವಸ್ಥಾಪಕ ಡಾ.ಎಂ.ವ್ಹಿ. ಲಕ್ಕನ್ನವರ, ಮುಂತಾದವರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ