ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸರ್ಕಾರದಿಂದ ಕೆಎಂಎಫ್‍ಗೆ 32 ಎಕರೆ ಜಮೀನನ್ನು ನೀಡುತ್ತಿದ್ದು, ಇದರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಜಮೀನಿನಲ್ಲಿ ಅತ್ಯಾಧುನಿಕ ಉತ್ಪನ್ನಗಳ ಮತ್ತು ಪ್ಯಾಕಿಂಗ್ ಸಾಮಗ್ರಿಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲು ಉದ್ಧೇಶಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಕೆಎಂಎಫ್‍ಗೆ ಜಾಗೆ ನೀಡುವ ಸಂಬಂಧ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರು ಪ್ರಯತ್ನಿಸುತ್ತಿದ್ದಾರೆ. ಪ್ರಕ್ರಿಯೆ ಮುಗಿದು ಕೆಎಂಎಫ್‍ಗೆ ಹಸ್ತಾಂತರಿಸಿದ ನಂತರ ಅದನ್ನು ಅಭಿವೃದ್ಧಿಪಡಿಸುವುದಾಗಿ ಅವರು ಹೇಳಿದರು.
ಕೊರೋನಾ ಅವಧಿಯಲ್ಲಿಯೂ ನಂದಿನಿ ಅಡಿಯಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರಾಟವು ಪ್ರೋತ್ಸಾಹದಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರುವರಿ ತಿಂಗಳ ಅಂತ್ಯದೊಳಗೆ ನಂದಿನಿ ಬ್ರೆಡ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ನಂತರ ಮಾರ್ಚ ತಿಂಗಳಲ್ಲಿ ಉತ್ಕೃಷ್ಠ ಶ್ರೇಣಿಯ ಪ್ರೀಮಿಯಂ ಚಾಕಲೇಟ್‍ಗಳನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ಧೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ನಂದಿನಿ ಉತ್ಪನ್ನಗಳು ಹೊರ ರಾಜ್ಯದಲ್ಲಿಯೂ ಸಹ ಬೇಡಿಕೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಬಯಿ, ಪುಣೆ, ಹೈದ್ರಾಬಾದ್, ಗೋವಾ, ಚೆನ್ನೈ ಮುಂತಾದ ನಗರಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಶ್ಯವಿರುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ದೀರ್ಘ ಕಾಲ ಬಾಳಿಕೆ ಬರುವ ಹಾಲಿನ ಉತ್ಪನ್ನಗಳ ಗುಡ್ ಲೈಫ್ ಹಾಲು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ದಿನಾಲೂ 8.8 ಲಕ್ಷ ಲೀಟರ್ ದೇಶದಾದ್ಯಂತ ಮಾರಾಟವಾಗುತ್ತಿದೆ. ಇದರ ಜಾಲವನ್ನು ಮುಂದಿನ ದಿನಗಳಲ್ಲಿ ದೇಶದ ಎಲ್ಲ ಭಾಗಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
2019-20ನೇ ಸಾಲಿನಲ್ಲಿ ಈಗಾಗಲೇ ಜಿಲ್ಲಾ ಹಾಲು ಒಕ್ಕೂಟಗಳಿಗೆ 12 ಕೋಟಿ ರೂ.ಗಳಷ್ಟು ಶೇರ್ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದ್ದು, ತಾತ್ವಿಕವಾಗಿ ಬೆಂಗಳೂರು ಹಾಲು ಒಕ್ಕೂಟಕ್ಕೆ ಹೊಸ ವರ್ಷದ ಪ್ರಯುಕ್ತ 2.58 ಕೋಟಿ ಶೇರ್ ಪ್ರಮಾಣ ಪತ್ರವನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಅವರಿಗೆ ವಿತರಿಸಿದರು.
ಕೆಎಂಎಫ್‍ನಿಂದ ರೈತರಿಗೆ ಹಲವು ಪ್ರಯೋಜನ :
ಪಶು ಆಹಾರ ಉತ್ಪಾದನೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ರೈತರಿಂದ ನೇರ ಖರೀದಿ, ಪ್ರತಿ ಕ್ವಿಂಟಲ್‍ಗೆ ರೂ. 1560 ದರದಲ್ಲಿ ರೈತರಿಂದ ನೇರವಾಗಿ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ, ರೈತರಿಗೆ ಸರಿಯಾದ ಬೆಂಬಲ ಬೆಲೆ ಮೂಲಕ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ. ಪಶು ಆಹಾರ ಪೂರೈಕೆಯಲ್ಲಿ ಕೊರತೆ ಉಂಟಾಗದಿರಲು ಧಾರವಾಡ ಮತ್ತು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ತಲಾ 300 ಮೆಟ್ರಿಕ್ ಟನ್ ಸಾಮಥ್ರ್ಯದ ನೂತನ ಪಶು ಆಹಾರ ಘಟಕ ಸ್ಥಾಪಿಸಲಾಗಿದೆ. ಹಸುಗಳು ಗರ್ಭಧರಿಸುವ ಮತ್ತು ಹಾಲು ಇಳುವರಿ ಕಡಿಮೆಯಾಗುವ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗುಣಮಟ್ಟದ ಚಿಲೆಟೆಡ್ ಖನಿಜ ಮಿಶ್ರಣ ಆರಂಭಿಸಲಾಗಿದೆ. ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟನ್ನು ರಿಯಾಯತಿ ದರದಲ್ಲಿ ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ರೈತರ ಆರ್ಥಿಕಾಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೆಎಂಎಫ್ ಹಲವಾರು ಹೊಸ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸರ್ವರಿಗೂ ಹೊಸ ವರ್ಷದ ಶುಭಾಷಯಗಳನ್ನು ಕೋರಿದ ಅವರು, ರೈತರು, ಗ್ರಾಹಕರ ಹಿತದೃಷ್ಟಿಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ರೈತರ ಅಭಿವೃದ್ಧಿಯೇ ನಮ್ಮ ಗುರಿಯಾಗಿರಬೇಕು. ಗ್ರಾಹಕರು ಹಾಗೂ ರೈತರ ಸಹಕಾರದಿಂದ ನಂದಿನಿ ದೇಶದಲ್ಲಿಯೇ ನಂಬರ.1 ಸಂಸ್ಥೆಯನ್ನಾಗಿ ಪರಿವರ್ತಿಸುವ ಗುರಿ ನಮ್ಮದಾಗಿದೆ ಎಂದು ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಖರೀದಿ ಮತ್ತು ಆಡಳಿತ ವಿಭಾಗದ ನಿರ್ದೇಶಕ ಸುರೇಶಕುಮಾರ, ಮಾರುಕಟ್ಟೆ ನಿರ್ದೇಶಕ ಎಂ.ಟಿ. ಕುಲಕರ್ಣಿ, ವಿತ್ತ ನಿರ್ದೇಶಕ ರಮೇಶ ಕೊಣ್ಣೂರ, ಆಡಳಿತ ವಿಭಾಗದ ನಿರ್ದೇಶಕ ಡಾ.ಸಿ.ಎನ್. ರಮೇಶ, ಗುಣನಿಯಂತ್ರಣ ವಿಭಾಗದ ನಿರ್ದೇಶಕ ಮುನಿರೆಡ್ಡಿ, ಕೆಎಂಎಫ್‍ನ ಇತರೇ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಾಮುಂಡೇಶ್ವರಿ ದರ್ಶನ ಪಡೆದ ಬಾಲಚಂದ್ರ :
ಸಭೆ ಮುಗಿದ ಬಳಿಕ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದೇವರ ದರ್ಶನ ಪಡೆದರು. ಹೊಸ ವರ್ಷದ ಪ್ರಯುಕ್ತ ನಾಡಿನ ಜನತೆಗೆ ಸುಖ ಶಾಂತಿ ನೆಮ್ಮದಿ ಸಮೃದ್ಧಿ ದೊರೆಯಲಿ. ಎಲ್ಲರಿಗೂ ಒಳ್ಳೆಯದಾಗಲಿ. ರೈತರ ಸಹಕಾರದಿಂದ ಕೆಎಂಎಫ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಲಿ ಎಂಬ ಸದುದ್ಧೇಶದಿಂದ ನಾಡದೇವತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದಾಗಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.