ಗೋಕಾಕ : ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ, ವಾಹನ ಸಂಚಾರ ಬಂದ್ ಗೊಳಿಸಿ ಧರಣಿ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು.
ರೈತರಿಗೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮರಣ ಶಾಸನ ಹೊರಡಿಸುತ್ತಿವೆ. ಕಾರ್ಮಿಕ ನೀತಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಮಸೂದೆ, ಭೂಸ್ವಾಧೀನ ಕಾಯ್ದೆ, ವಿದ್ಯುತ್ ಖಾಸಗೀಕರಣ ಇತ್ಯಾದಿ ಕ್ರಮಗಳನ್ನ ರೈತ ಸಂಘಟನೆಗಳು ಬಲವಾಗಿ ವಿರೋಧಿಸಿದರು.
ಈಗಾಗಲೇ ಪಂಜಾಬ, ಕೇರಳ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಸಹ ಎಂಆರ್ ಪಿ ಬೆಲೆ ನಿಗದಿ ಮಾಡಬೇಕು. ಇಲ್ಲದಿದ್ರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ ರೈತರು ಕರ್ನಾಟಕ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಗಣಪತಿ ಇಳಗೇರ, ತಾಲ್ಲೂಕು ಅಧ್ಯಕ್ಷ ಮುತ್ತಪ್ಪಾ, ಉಪಾಧ್ಯಕ್ಷ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.