ಬಳ್ಳಾರಿ : ಹೂವಿನಹಡಗಲಿ ತಾಲೂಕಿನ ತಹಶೀಲ್ದಾರರ ಮೇಲೆ ಲಂಚ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ ವಿಜಯಕುಮಾರ್ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ಹೂವಿನಹಡಗಲಿ ತಾಲೂಕು ತಹಶೀಲ್ದಾರರಾದ ವಿಜಯಕುಮಾರ್ ಎಂಬುವರು ಲಂಚ ಕೇಳಿದ್ದಾರೆ. ತಹಶೀಲ್ದಾರ ಲಂಚ ಕೇಳಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕಳೆದ 20 ದಿನಗಳ ಹಿಂದೆ ಹೂವಿನಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬುವವರ ಮರಳು ಲಾರಿ ಸೀಜ್ ಮಾಡಿದ್ದು, ಮರಳಿ ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ತಹಶೀಲ್ದಾರ ವಿಜಯಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ನನ್ನದು ವಾರದ ಲೆಕ್ಕ, ಇಲ್ಲ ನನ್ನ ಜೊತೆಯಲ್ಲಿ ಮಾತನಾಡಬೇಡಿ, 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟ್ಟಿದ್ದಾರೆ. ತಹಶೀಲ್ದಾರ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ, ಕೂಡಲೇ ತಹಶೀಲ್ದಾರರಾದ ವಿಜಯಕುಮಾರ್ ಅವರನ್ನು ಅಮಾನತ್ತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರಿಗೆ ದೂರು ನೀಡಿದ್ದರು. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ಅವರು ವಿಜಯಕುಮಾರ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ತಹಶೀಲ್ದಾರ್ ಮೇಲಿನ ಆಪಾದನೆಗಳು ಮೇಲ್ನೋಟಕ್ಕೆ ನೈಜ ಎಂದು ಕಂಡು ಬಂದಿರುವುದರಿಂದ ವಿಜಯಕುಮಾರ್ ಅವರನ್ನು ತಕ್ಷಣದಿಂದ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಸದರಿ ಹುದ್ದೆಗೆ ವಿಶ್ವಜಿತ್ ಮೆಹತಾ ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.