ದಾವಣಗೆರೆ: ವಾಲ್ಮೀಕಿ ಸಮುದಾಯಕ್ಕೆ 7. 5 ಮೀಸಲಾತಿ ಕಲ್ಪಿಸುವ ಬಗ್ಗೆ ಮತ್ತೆ ಕೂಗು ಎದ್ದಿದ್ದು, ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮೀಸಲಾತಿ ಘೋಷಿಸದಿದ್ದಲ್ಲಿ, ವಾಲ್ಮೀಕಿ ಸಮಯದಾಯದ ಎಲ್ಲ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲು ಬದ್ದರಾಗಿರುವ ಒಮ್ಮತ ಮೂಡಿಬಂದಿದೆ.
ಮೀಸಲಾತಿ ವಿಚಾರವಾಗಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಭಾನುವಾರ ಪ್ರಸನ್ನಾನಂದಪುರ ಸ್ವಾಮೀಜಿಗಳ ನೇತೃತ್ವದ ಮಹತ್ವದ ಸಭೆ ನಡೆದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಚಿವ ಶ್ರೀರಾಮುಲು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ನ್ಯಾ. ನಾಗಮೋಹನ್ ದಾಸ್ ಅವರು ಸರ್ಕಾರ ನೀಡದ ವರದಿ ಆಧರಿಸಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಚಿವ ಶ್ರೀರಾಮುಲು, ಪ್ರಸನ್ನಾನಂದಪುರಿ ಶ್ರೀ ನೇತೃತ್ವದ ನಿಯೋಗ ಸೆ. 21 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ವಾಲ್ಮೀಕಿ ಸಮುದಾಯಕ್ಕೆ ಶೇ. 7. 5 ಮೀಸಲಾತಿ ನೀಡದಿದ್ದಲ್ಲಿ ಎಲ್ಲ ಶಾಸಕರು ರಾಜೀನಾಮೆ ನೀಡಲು ಬದ್ದರಾಗಿದ್ದಾರೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಭಿನಂದನೆ ಸಲ್ಲಿಸುತ್ತೇವೆ. ಇಲ್ಲದಿದ್ದಲ್ಲಿ ಮುಂದೆ ನಮ್ಮ ದಾರಿಯಲ್ಲಿ ಸಾಗುತ್ತೇವೆ ಎಂದು ಪ್ರಸನ್ನಾನಂಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದುಳಿದಿರುವ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಕಲ್ಪಿಸುವಂತೆ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಇತ್ತೀಚಿಗೆ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜನಹಳ್ಳಿಯಿಂದ ಬೆಂಗಳೂರು ವರೆಗೂ ಪಾದಯಾತ್ರೆ ನಡೆಸಲಾಗಿತ್ತು.
ಅಂದಿನ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮೀಸಲಾತಿ ಕಲ್ಪಿಸುವ ವಿಚಾರವಾಗಿ ನಿವೃತ್ತ ನ್ಯಾ, ನಾಗಮೋಹನದಾಸ್ ನೇತೃತ್ವದ ಸಮಿತಿ ರಚಿಸಿ ವರದಿ ಸಲ್ಲಿಸಲು ಕೋರಿತ್ತು. ಬಳಿಕ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು. ಸದ್ಯ ನ್ಯಾ. ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಮೀಸಲಾತಿ ಕೂಗು ಮತ್ತೆ ಕಾವು ಪಡೆದುಕೊಂಡಿದೆ.
ಇಂದಿನ ಸಭೆಗೂ ಮೊದಲು ಸಚಿವ ಶ್ರೀರಾಮುಲು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಮೀಸಲಾತಿ ಜಾರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದು, ಆದಷ್ಟು ಬೇಗ ಜಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಿಡಿಸದ್ದಾರೆ.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ದರಾಗಿರುವುದಾಗಿ ತಿಳಿಸಿದ್ದಾರೆ.