ಅಥಣಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈವರೆಗೂ ಪ್ರವಾಹ ಪೀಡಿತ ಗ್ರಾಮಗಳತ್ತ ಸುಳಿಯದ ಅಧಿಕಾರಿಗಳು ಇಂದು ದಿಢೀರ್ ಪ್ರತ್ಯಕ್ಷವಾಗಿ ಸಂತ್ರಸ್ತರ ಕುಂದು ಕೊರತೆ ಆಲಿಸುತ್ತಿರುವುದು ಕಂಡು ಬಂದಿದೆ.
ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಲಗಬಾಳಿ ಗ್ರಾಮಕ್ಕೆ ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗಣ್ಣವರ, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ತಾಪಂ ಇಒ ರವಿ ಬಂಗಾರಪ್ಪನವರ ಜೊತೆಯಾಗಿ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ.
ನಿನ್ನೆಯಷ್ಟೇ ಹುಲಗಬಾಳ ಗ್ರಾಮಕ್ಕೆ ಬೋಟ್ ಒದಗಿಸುವಂತೆ ಸಿಎಂ ಯಡಿಯೂರಪ್ಪ ಅವರು, ಬೆಳಗಾವಿ ಜಿಲ್ಲಾಧಿಕಾರಿ ಎಮ್. ಜಿ .ಹಿರೇಮಠ್ ಅವರಿಗೆ ಕರೆ ಮಾಡಿದ್ದರು. ಹುಲಗಬಾಳ ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ಸಂತ್ರಸ್ತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿ ಪ್ರವಾಹದ ಪ್ರಾಥಮಿಕ ಹಂತದ ಹತ್ತು ಸಾವಿರ ರೂಪಾಯಿ, ಮತ್ತು ಬಿದ್ದಿರುವ ಮನೆಗಳ ಪರಿಹಾರ ಸೇರಿದಂತೆ ಶಾಶ್ವತ ಸ್ಥಳಾಂತರಕ್ಕೆ ಆಗ್ರಹಿಸಿದ್ದರು.
ಇನ್ನೂ ಸಂತ್ರಸ್ತ ಜನರನ್ನು ಸಮಾಧಾನ ಪಡಿಸಿದ ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗಣ್ಣವರ ಕಳೆದ ವರ್ಷದ ಪ್ರವಾಹ ಸಂಧರ್ಭದಲ್ಲಿ ನಡೆದ ಸಮೀಕ್ಷೆಯ ಭಾಗಶ ಹಣವನ್ನು ಈಗಾಗಲೇ ಹಲವರಿಗೆ ನೀಡಲಾಗಿದೆ. ತಾಂತ್ರಿಕ ತೊಂದರೆ ಇಂದಾಗಿ ಹಲವರಿಗೆ ಪರಿಹಾರ ವಿಳಂಬವಾಗಿದೆ. ಸದ್ಯದ ಮಟ್ಟಿಗೆ ಬೋಟ್ ಸಿದ್ದವಿದ್ದು, ಯಾರಾದರೂ ಜಮೀನು ಕೊಟ್ಟರೆ ಹುಲಗಬಾಳ ಗ್ರಾಮದ ಮಾಂಗ್ ತೋಟದ ವಸತಿ ಜನರನ್ನು ಶಾಶ್ವತ ಸ್ಥಳಾಂತರಿಸಲು ಅನುಕೂಲವಾಗಲಿದೆ ಎಂದಿದ್ದಾರೆ.